ಬೆಳಗಾವಿ : ವಿಧಾನ ಮಂಡಲದ ಉಭಯ ಸದನಗಳಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸೋಮವಾರ ಸಂತಾಪ ಸೂಚಿಸಿ, ಎರಡೂ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ವಿಧಾನಸಭೆಯಲ್ಲಿ ಸಂತಾಪ ಸೂಚನೆ ನಿರ್ಣಯ ಮಂಡಿಸಿ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್, ಎಷ್ಟೇ ಜಟಿಲವಾದ ಸಮಸ್ಯೆಯನ್ನೂ ತಾಳ್ಮೆಯಿಂದ ನಿಭಾಯಿಸುವ ಗುಣ ಶಾಮನೂರು ಅವರಲ್ಲಿತ್ತು. ಅವರ ಜೀವನವೇ ಒಂದು ಸಂದೇಶ’ ಎಂದು ಬಣ್ಣಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ದಾವಣಗೆರೆಯನ್ನು ವಿದ್ಯಾಕಾಶಿಯಾಗಿ ರೂಪಿಸುವ ಜೊತೆಗೆ, ಅಲ್ಲಿಗೆ ಬ್ರಾಂಡ್ ಹೆಸರು ತಂದಕೊಟ್ಟವರು ಶಾಮನೂರು ಶಿವಶಂಕರಪ್ಪನವರು’ ಎಂದರು.
ವಿರೋಧ ಪಕ್ಷದ ನಾಯಕ ಆರ್, ಅಶೋಕ, ಸಚಿವರಾದ ಕೆ.ಎಚ್. ಮುನಿಯಪ್ಪ, ಜಮೀರ್ ಅಹಮದ್ ಖಾನ್, ಬಿಜೆಪಿ ಎಸ್. ಸುರೇಶ್ ಕುಮಾರ್, ಸಿದ್ದು ಸವದಿ, ಆರಗ ಜ್ಞಾನೇಂದ್ರ, ಸಿಮೆಂಟ್ ಮಂಜು, ಕಾಂಗ್ರೆಸ್ನ ಯು.ಬಿ. ಬಣಕಾರ, ಜಿ.ಟಿ. ಪಾಟೀಲ, ಶಿವಲಿಂಗೇಗೌಡ, ಅಪ್ಪಾಜಿ ನಾಡಗೌಡ ಮತ್ತಿತರರು ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ವಿಧಾನ ಪರಿಷತ್ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಸಭಾನಾಯಕ ಎನ್.ಎಸ್. ಬೋಸರಾಜು, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಬಿಜೆಪಿಯ ಪ್ರದೀಪ ಶೆಟ್ಟರ್, ಸಿ.ಟಿ. ರವಿ, ಎನ್. ರವಿಕುಮಾರ್, ಜೆಡಿಎಸ್ನ ಎಸ್.ಎಲ್. ಭೋಜರಾಜು ಮತ್ತಿತರರು ಶಾಮನೂರು ಶಿವಶಂಕರಪ್ಪ ಅವರಿಗೆ ಸಂತಾಪ ವ್ಯಕ್ತಪಡಿಸಿದರು.


