ಬೆಂಗಳೂರು: ತಿಂಗಳುಗಳ ಕಾಲ ಅನಿಶ್ಚಿತ ಪರಿಸ್ಥಿತಿಯ ನಂತರ ರಾಜ್ಯದ ಗೃಹ ಇಲಾಖೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ನಡೆಸುವುದಕ್ಕೆ ಶನಿವಾರ ಷರತ್ತಿನೊಂದಿಗೆ ಅನುಮತಿ ನೀಡಿದೆ.
‘ಕ್ರಿಕೆಟ್ ಹೆಗ್ಗುರುತಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಗೃಹ ಇಲಾಖೆ ಅನುಮತಿ ನೀಡಿದೆ ಎಂದು ತಿಳಿಸಲು ಸಂತಸವಾಗುತ್ತಿದೆ’ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ನಿಗದಿಪಡಿಸಿರುವ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಲಾಗಿದೆ. ಈ ಎಲ್ಲ ಷರತ್ತುಗಳನ್ನು ಈಡೇರಿಸುವ ವಿಶ್ವಾಸವನ್ನು ಕೆಎಸ್ಸಿಎ ಹೊಂದಿದೆ’ ಎಂದು ಅವರು ಹೇಳಿದ್ದಾರೆ.
2025ರ ಜೂನ್ 3ರಂದು ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿಯು, ಮರುದಿನ ಹಮ್ಮಿಕೊಂಡ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಕಾಲ್ತುಳಿತ ಸಂಭವಿಸಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದರು. ನಂತರ ಇಲ್ಲಿ ಯಾವುದೇ ಪ್ರಮುಖ ಪಂದ್ಯ ನಡೆಸಲು ಅನುಮತಿ ಸಿಕ್ಕಿರಲಿಲ್ಲ.


