ಬೆಳಗಾವಿ:
ನಾಗರಿಕರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಬೇಕಾದ ಎಲ್ ಆ್ಯಂಡ್ ಟಿ ಕಂಪನಿಗೆ ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಬಿಗ್ ಶಾಕ್ ನೀಡಿದ್ದಾರೆ.
ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿಯು ಕಾಮಗಾರಿಯಲ್ಲಿ ಬಹಳ ವಿಳಂಬ ಮತ್ತು ಕಳಪೆ ಕಾಮಗಾರಿ ಮಾಡಿದ ಕಾರಣಕ್ಕೆ ಮಹಾನಗರಪಾಲಿಕೆ ಆಯುಕ್ತರು ಇದೀಗ 21 ಕೋಟಿ ದಂಡ ವಿಧಿಸಿದ್ದಾರೆ.
ಪತ್ರಕರ್ತರಿಗೆ ಈ ಬಗ್ಗೆ ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು, ಎಲ್ ಆ್ಯಂಡ್ ಟಿ ಕಂಪನಿ ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಯ ಕಾಮಗಾರಿಯನ್ನು ಐದು ವರ್ಷಗಳ ಕಾಲ ಗುತ್ತಿಗೆ ಪಡೆದಿದೆ. ಆದರೆ ಎಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕಂಪನಿಗೆ 21 ಕೋಟಿ 46 ಲಕ್ಷ ದಂಡ ವಿಧಿಸಲಾಗಿದೆ. ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ಕಂಪನಿಯು ಕಾಮಗಾರಿಯ ಗುತ್ತಿಗೆ ಪಡೆದು ಮೂರು ವರ್ಷಗಳಾದವು. ಇನ್ನು ಎರಡು ವರ್ಷ ಮಾತ್ರ ಬಾಕಿ ಇದೆ. ಆದರೆ ಇದುವರೆಗೆ ಅರ್ಧದಷ್ಟು ಕಾಮಗಾರಿ ಮುಗಿದಿಲ್ಲ. ಅನೇಕ ಕಡೆ ಕಳಪೆ ಕಾಮಗಾರಿಯ ದೂರುಗಳು ಬಂದಿವೆ. ಈ ಎಲ್ಲ ಕಾರಣಗಳಿಂದ ಕಂಪನಿಗೆ ದಂಡ ವಿಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.