ಹುಕ್ಕೇರಿ ಮತಕ್ಷೇತ್ರದಲ್ಲಿ ಕತ್ತಿ ಸಹೋದರರ ಪ್ರಭುತ್ವವಿದೆ. ಹುಕ್ಕೇರಿ ಎಂದರೆ ಕತ್ತಿ. ಕತ್ತಿ ಎಂದರೆ ಹುಕ್ಕೇರಿ ಎಂಬ ಮಾತು ಇಲ್ಲಿ ಪ್ರಚಲಿತ. ಆದರೆ ವಿಜಯಾನಂದ ಕಾಶಪ್ಪನವರ ಆಡಿದ ಮಾತೊಂದು ರಮೇಶ ಕತ್ತಿ ಅವರ ಪುತ್ರನನ್ನು ಕೆರಳಿಸಲು ಕಾರಣವಾಯಿತು. ಮಾತ್ರವಲ್ಲ ಸಮಾವೇಶದ ಮುಖ್ಯ ಉದ್ದೇಶವೇ ಮರೆಯಾಯಿತು.
ಹುಕ್ಕೇರಿ :
ಹುಕ್ಕೇರಿಯಲ್ಲಿ ಶುಕ್ರವಾರ ನಡೆದ ಪಂಚಮಸಾಲಿ ಸಮಾವೇಶ ಕೆಲ ಗೊಂದಲಗಳಿಗೆ ಕಾರಣವಾಯಿತು.
ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ವಿಜಯಾನಂದ ಕಾಶಪ್ಪನವರ ಭಾಷಣಕ್ಕೆ ಚಿಕ್ಕೋಡಿಯ ಮಾಜಿ ಸಂಸದ, ಬಿಜೆಪಿ ನಾಯಕ
ರಮೇಶ ಕತ್ತಿ ಪುತ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಗೆ ಸಮಾವೇಶ ಸಾಕ್ಷಿಯಾಯಿತು.
ಈ ಬಾರಿ ಚುನಾವಣೆಯಲ್ಲಿ ಹುಕ್ಕೇರಿ ಮತಕ್ಷೇತ್ರದಲ್ಲಿ ಪಂಚಮಸಾಲಿಗಳನ್ನು ಗೆಲ್ಲಿಸಿ ಎಂದು ವಿಜಯಾನಂದ ಕಾಶಪ್ಪನವರ ಕರೆಕೊಟ್ಟರು.
ಅದನ್ನು ಗಮನಿಸಿದ ಸಮಾವೇಶದಲ್ಲಿ ಭಾಗಿಯಾಗಿದ್ದ ರಮೇಶ ಕತ್ತಿ ಅವರ ಪುತ್ರ ರಾಜಕಾರಣ ಬಿಟ್ಟು ಕೇವಲ ಮೀಸಲಾತಿ ಕುರಿತು ಮಾತನಾಡಿ. ಅದು ಬಿಟ್ಟು ಬೇರೆ ಮಾತನಾಡಬೇಡಿ. ಕೆಳಗಿಳಿದು ಬಾ ಎಂದರು. ಆಗ ಗೊಂದಲ ಉಂಟಾಗಿ ಯಾರು ಏನು ಹೇಳುತ್ತಿದ್ದಾರೆ ಎನ್ನುವುದು ತಿಳಿಯದಾಯಿತು.
ಇದಕ್ಕೆ ಅಸಮಾಧಾನ ಸೂಚಿಸಿದ ಕಾಶಪ್ಪನವರ್ ನಾನು ಸಹ ಸಚಿವನ ಮಗನಾಗಿದ್ದೆ. ರಾಜ್ಯ ಸುತ್ತಾಡಿ ಏಳುಕೆರೆ ನೀರು ಕುಡಿದಿದ್ದೇನೆ ಎಂದು ಕತ್ತಿ ಕುಟುಂಬದ ಸುಪುತ್ರನ ಮೇಲೆ ಹರಿಹಾಯ್ದರು.
ನಂತರ ರಮೇಶ ಪುತ್ರ ಏಕಾಏಕಿ ಸಮಾವೇಶದಿಂದ ನಿರ್ಗಮಿಸಿದರು. ಆ ಸಂದರ್ಭದಲ್ಲಿ ಸಮಾವೇಶದಲ್ಲಿ ಕೆಲ ಹೊತ್ತು ಗೊಂದಲ ಏರ್ಪಟ್ಟಿತ್ತು.