ಬೆಳಗಾವಿ : ನಾಣ್ಯಗಳು ಇತಿಹಾಸದ ಪ್ರಮುಖ ಪುರಾತತ್ವ ಮೂಲವಾಗಿದೆ. ಅವು ಭಾಷೆ, ಆಡಳಿತ, ಧರ್ಮ, ಆರ್ಥಿಕತೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಎಂದು ಪ್ರಾಚಾರ್ಯ ಪ್ರೊ ಎಂ. ಜಿ. ಹೆಗಡೆ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಇತಿಹಾಸ ವಿಭಾಗವು ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಮಾ. ೨೮ರಂದು ಆಯೋಜಿಸಿದ್ದ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ನಾಣ್ಯಗಳು ಇತಿಹಾಸ ರಚನೆಯಲ್ಲಿ ಬಹು ಮುಖ್ಯ ಪಾತ್ರವಹಿಸಿದೆ. ನಾಣ್ಯಗಳಿಂದ ಒಂದು ನಾಡಿನ ವ್ಯವಹಾರದ ದಿಕ್ಕುದೆಸೆಗಳನ್ನು ಅರಿಯಲು ಸಾಧ್ಯವಾಯಿತು. ಪ್ರಾಚೀನ ಕಾಲದಲ್ಲಿ ನಾಣ್ಯಗಳನ್ನು ಪರಿಚಯಿಸುವ ಮೊದಲು ವಸ್ತು ವಿನಿಮಯ ವ್ಯವಸ್ಥೆ ಇತ್ತು. ನಾಣ್ಯಗಳ ಪರಿಚಯದಿಂದ ಆರ್ಥಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಯಿತು. ಅಭಿವೃದ್ಧಿಯಲ್ಲಿ ಹೊಸ ಶಕೆ ಆರಂಭವಾಯಿತು. ನಾಡಿನ ಸಾಂಸ್ಕೃತಿಕ ಚಹರೆಗಳನ್ನು ಅರಿಯಲು ನಾಣ್ಯಗಳು ಪ್ರಮುಖವಾದುದು. ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸದಾಶಿವ ಮುಗಳಿ ಅವರು ದೇಶ-ವಿದೇಶಗಳ ಪ್ರಾಚೀನ ಮತ್ತು ಅರ್ವಾಚೀನ ಕಾಲದ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇವುಗಳನ್ನು ಅಂತರ್ಜಾಲದಲ್ಲಿ ನೋಡಬಹುದು ವಿನಃ ಪ್ರತ್ಯಕ್ಷವಾಗಿ ನೋಡಲು ಸಿಗುವುದು ಬಹು ಅಪರೂಪ. ಇಲ್ಲಿ ಒಟ್ಟೂ 110 ವಿವಿಧ ರಾಜಮನೆತನಗಳ ನಾಣ್ಯಗಳು ಮತ್ತು 224 ದೇಶದ ನೋಟುಗಳಿವೆ. ಅವು ಕ್ರಿಸ್ತ ಪೂರ್ವದಿಂದ ಇಲ್ಲಿಯವರೆಗಿನಗಳಾಗಿವೆ ಎಂದರು.
ಇತಿಹಾಸ ಉಪನ್ಯಾಸಕಿ ಡಾ. ನೂತನ ದೇಸಾಯಿ ಸ್ವಾಗತಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನಾಣ್ಯಗಳ ಪ್ರದರ್ಶನವನ್ನು ವೀಕ್ಷಿಸಿದರು. ಭಾಗ್ಯಶ್ರೀ ಹೊನ್ನಕ್ಕನವರ್ ನಿರೂಪಿಸಿದರು.
ಸಿದ್ಧಾರೂಢ ಮೇತ್ರಿ ವಂದಿಸಿದರು.