ಬೆಂಗಳೂರು:
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಲಬುರ್ಗಿಯಲ್ಲಿ ವಚನ ಮಂಟಪ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಪ್ರತಿಸ್ಪಂದಿಸಿದ್ದಾರೆ.
ಈ ಕುರಿತಂತೆ ನಿನ್ನೆಯಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬೆಂಗಳೂರು ಅಥವಾ ಕಲಬುರಗಿಯಲ್ಲಿ ‘ವಚನ ಮಂಟಪ’ ಹಾಗೂ ‘ವಚನ ವಿಶ್ವವಿದ್ಯಾಲಯ’ ಸ್ಥಾಪಿಸುವಂತೆ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.
ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿರುವಂತ ಅವರು, ಕನ್ನಡ ನಾಡು ಇಂದು ಇಡೀ ವಿಶ್ವದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಗಳಿಸಿ, ಭಾರತ ದೇಶದ ಆರ್ಥಿಕ ಯಂತ್ರವಾಗಿ ಕಾರ್ಯ ನಿರ್ವಹಿಸುತ್ತಾ ಒಂದು ಅಮೋಘ ರಾಜ್ಯವಾಗಿ ರೂಪುಗೊಳ್ಳಲು ನಮ್ಮ ನಾಡಿನ ತಾತ್ವಿಕ ಅಡಿಪಾಯವೇ ಕಾರಣ. ಈ ತತ್ವಗಳ ಆಶಯವನ್ನು ಜಗತ್ತಿಗೆ ತಿಳಿಸಲು ಇರುವ ಭಾಷೆಯ ಅಂತರಕ್ಕೆ ಸೇತುವೆ ಕಟ್ಟುವ ಮಹತ್ತರವಾದ ಕೆಲಸ ಮಾಡುವ ನಿಟ್ಟಿನಲ್ಲಿ ಈ ಕೆಳಗಿನ ಎರಡು ಮನವಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು.
1) ವಚನ ಮಂಟಪ: ನಾಡಿನ ರಾಜಧಾನಿಯಾದ ಬೆಂಗಳೂರಿನಲ್ಲಿ ಅಥವಾ ಶರಣ ಸಾಹಿತ್ಯದ ಕೇಂದ್ರ ಬಿಂದುವಾಗಿದ್ದ ಕಲಬುರಗಿಯಲ್ಲಿ ಜಗಜ್ಯೋತಿ ಗುರು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ದೇವರ ದಾಸಿಮ್ಮಯ್ಯ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಸರ್ವಜ್ಞರಂತಹ ನಾಡಿನ ಮೇರು ಶರಣ ಸಾಹಿತಿಗಳ ಬದುಕು ಹಾಗೂ ಅವರಿಂದ ರಚಿತವಾದ ವಚನಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಿ ಅರಿವು ಮೂಡಿಸುವ ಕೇಂದ್ರವಾಗಿ, ವಚನ ಸಂಗ್ರಹಾಲಯವಾಗಿ “ವಚನ ಮಂಟಪ”ವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಇದಕ್ಕಾಗಿ 20 ಎಕರೆ ಜಾಗವನ್ನು ಮೀಸಲಿಡಬೇಕೆಂದು ಕೋರಿದ್ದರು.
2) ವಚನ ವಿಶ್ವವಿದ್ಯಾಲಯ: ನಾಡಿನಲ್ಲಿ ಸಮಾನತೆಯ ಯೋಚನಾ ಲಹರಿಯನ್ನು ಬಲವಾಗಿ ಪ್ರತಿಪಾದಿಸಿದ, ಕನ್ನಡ ನಾಡಿನಲ್ಲಿ ಸಾಮಾಜಿಕ ನ್ಯಾಯ ಹಾಗೂ ಜನರಲ್ಲಿ ಪ್ರಜ್ಞಾವಂತ ಮನೋಭಾವವನ್ನು ಮೂಡಿಸಿದ ನೆಲಮೂಲದ ಬಸವವಾದಿ ಶರಣರ ತತ್ವಗಳನ್ನು ಸೇರಿದಂತೆ ಪ್ರಗತಿಪರ ಕರ್ನಾಟಕಕ್ಕೆ ರಹದಾರಿಯಾಗಿರುವ ಎಲ್ಲಾ ತತ್ವಗಳ ಅಧ್ಯಯನಕ್ಕಾಗಿ ಹಾಗೂ ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ದೇಶದ ಸಂವಿಧಾನದಲ್ಲಿ ಅಡಗಿರುವ ಈ ತತ್ವಗಳ ಬಗ್ಗೆ ಸಾರ್ವಕಾಲಿಕವಾಗಿ ಅರಿವು ಮೂಡಿಸುವ ಮೂಲಕ ಗುರು ಬಸವಣ್ಣನವರ ಜ್ಞಾನದ ಜ್ಯೋತಿಯ ಪ್ರಕಾಶವನ್ನು ಇಡೀ ಜಗತ್ತಿಗೆ ಪ್ರಜ್ವಲಿಸುವಂತೆ ಮೂಡುವ ಸಲುವಾಗಿ ರಾಜ್ಯದಲ್ಲಿ ಒಂದು ಕೇಂದ್ರೀಕೃತ ‘ವಚನ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಈ ಎರಡೂ ಕೋರಿಕೆಗಳು ಕೇವಲ ನನ್ನದಲ್ಲ ಬಸವಣ್ಣನವರನ್ನು ಪ್ರತಿಪಾದಿಸುವ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ವಾಸಿಸುವ ಪ್ರತಿಯೊಬ್ಬರ ಬಯಕೆಯೂ ಆಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದರು. ಅದರಂತೆ ಕಲಬುರ್ಗಿಯಲ್ಲಿ ವಚನ ಮಂಟಪ ಸ್ಥಾಪನೆ ಮಾಡುವುದಾಗಿ ಘೋಷಣೆಯನ್ನು ಸಿಎಂ ಸಿದ್ಧರಾಮಯ್ಯ ಮಾಡಿದ್ದಾರೆ.