ಬೆಳಗಾವಿ : 1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳು,ಅಧ್ಯಕ್ಷೀಯ ಭಾಷಣ ಮತ್ತಿತರ ಮಾಹಿತಿಗಳು ಹಾಗೂ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ “ಗಾಂಧಿ ಭಾರತ ಮರು ನಿರ್ಮಾಣ” ಹಾಗೂ Reclaiming Gandhi Bharath ಕನ್ನಡ ಹಾಗೂ ಆಂಗ್ಲ ಪುಸ್ತಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ,ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.
ಸುವರ್ಣ ಸೌಧದ ಆವರಣದಲ್ಲಿ ಸ್ಥಾಪಿಸಿರುವ ಬೃಹತ್ ಗಾಂಧಿ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಈ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
1924 ರ ಕಾಂಗ್ರೆಸ್ ಅಧಿವೇಶನದ ನಿರ್ಣಯಗಳು,ಕೊಲ್ಕತ್ತಾ ಒಪ್ಪಂದ ಮತ್ತು ನೇಯ್ಗೆಯ ಮತಾಧಿಕಾರ,ಸರೋಜಿನಿ ನಾಯ್ಡು ಅವರ ವಿದೇಶಾಂಗ ಸೇವೆ,ಅಕಾಲಿಗಳಿಗೆ ಅಭಿನಂದನೆ,ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು, ಬರ್ಮಾದ ಜನರಿಗೆ ಸಹಾನುಭೂತಿ, ಕೋಹತ್ ಹಾಗೂ ಗುಲಬರ್ಗಾ ಗಲಭೆಗಳು,ಅಸ್ಪೃಶ್ಯತೆ ನಿವಾರಣೆ,ಅಧಿವೇಶನದ ಲೆಕ್ಕಪರಿಶೋಧನೆ ಸೇರಿದಂತೆ ಐತಿಹಾಸಿಕ ಮಾಹಿತಿಗಳು ಹಾಗೂ ಛಾಯಾಚಿತ್ರಗಳನ್ನು ಈ ಪುಸ್ತಕಗಳು ಒಳಗೊಂಡಿವೆ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ವಿಧಾನಸಭಾಧ್ಯಕ್ಷ ಯು.ಟಿ.ಖಾದರ್,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದರಾದ ಪ್ರಿಯಾಂಕಾ ಗಾಂಧಿ,ಕೆ.ಸಿ.ವೇಣುಗೋಪಾಲ,ರಣದೀಪ್ಸಿಂಗ್ ಸುರ್ಜೇವಾಲಾ,ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ,ಸಚಿವರಾದ ಎಚ್.ಕೆ.ಪಾಟೀಲ,ಡಾ.ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.
ಗಾಂಧೀಜಿ ಹಾಗೂ ಕಾಂಗ್ರೆಸ್ ಕೊಟ್ಟ ಅಹಿಂಸೆಯ ಆದರ್ಶವನ್ನು ವಿಶ್ವ ಒಪ್ಪಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಳಗಾವಿ: “ಗಾಂಧೀಜಿ ಹಾಗೂ ಕಾಂಗ್ರೆಸ್ ಕೊಟ್ಟ ಅಹಿಂಸೆಯ ಆದರ್ಶವನ್ನು ವಿಶ್ವ ಒಪ್ಪಿದೆ. ಇದನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ತಿಳಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಮಂಗಳವಾರದ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಗಾಂಧೀಜಿ ಅವರ ತತ್ವ ಆದರ್ಶಗಳು, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಉಳಿಸಬೇಕು. ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ದೇಶದ ಕಾರ್ಯಕ್ರಮ. ಗಾಂಧೀಜಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ, ತತ್ವ ಸಿದ್ಧಾಂತಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ಗಾಂಧೀಜಿ ಅವರ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು” ಎಂದು ತಿಳಿಸಿದರು.
“ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಹೀಗಾಗಿ ಇಂದು ಜೈ, ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಕರ್ನಾಟಕ ಹಾಗೂ ಬೆಳಗಾವಿ ಇತಿಹಾಸದ ಪುಟ ಸೇರಲಿವೆ” ಎಂದರು.
“ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು, ನಂತರ ಅಂಬೇಡ್ಕರ್ ಅವರು ನಮಗೆ ಸಂವಿಧಾನ ಕೊಟ್ಟರು. ಇವರ ತತ್ವ ಆದರ್ಶ, ಸಾಮಾಜಿಕ ನ್ಯಾಯ ಉಳಿಸಲು ಇಂದಿನ ಸಮಾವೇಶ ಅಗತ್ಯವಾಗಿದೆ. ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲಾಗಿದ್ದು, ಅದರಿಂದಲೇ ನಾವು ಇಂದು ನಾಯಕರಾಗಿದ್ದೇವೆ. ಇದನ್ನು ಉಳಿಸಿಕೊಳ್ಳಲು ನಾವು ಇಂದು ಸೇರಿದ್ದೇವೆ” ಎಂದು ತಿಳಿಸಿದರು.
ಗಾಂಧಿ ಹಾಗೂ ಅಂಬೇಡ್ಕರ್ ಹೆಸರಲ್ಲಿ ಕಾಂಗ್ರೆಸ್ ಜಾತ್ರೆ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಹೌದು, ನಾವು ಜಾತ್ರೆ ಮಾಡುತ್ತಿದ್ದೇವೆ. ಇಲ್ಲ ಎಂದವರು ಯಾರು? ಒಳ್ಳೆಯದಾಗಬೇಕು, ಸಂಸ್ಕೃತಿ ಉಳಿಯಲು ಜಾತ್ರೆ ಮಾಡಲಾಗುತ್ತದೆ. ಸಂಕ್ರಾಂತಿ ಸಮಯದಲ್ಲಿ ಹೊಸ ಸಂಕ್ರಮಣ, ಹೊಸ ಹುರುಪು ರೈತರ ಬದುಕಿಗೆ ಒಳ್ಳೆಯದಾಗಲಿ ಎಂದು ಮಾಡುತ್ತಾರೆ. ಅದೇ ರೀತಿ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ನಾವು ಜಾತ್ರೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಕಾರ್ಯಕ್ರಮದ ಬಗ್ಗೆ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ನಾನು ಬಿಜೆಪಿ ನಾಯಕರ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ಸ್ವಾತಂತ್ರ್ಯ ಚಳುವಳಿ ಎಂದರೆ ಏನು ಎಂಬುದೇ ಗೊತ್ತಿಲ್ಲ. ಈ ಚಳುವಳಿಯಲ್ಲಿ ಕಾಂಗ್ರೆಸಿಗರು ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಅವರಿಗೆ ಅರಿವಿಲ್ಲ. ಗೋಡ್ಸೆ ಸಿದ್ಧಾಂತ ಪಕ್ಷದವರಿಂದ ನಾವು ಮಾತು ಕೇಳಬೇಕಿಲ್ಲ. ಈ ದೇಶಕ್ಕೆ ಗಾಂಧೀಜಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಪ್ರಾಣತ್ಯಾಗ, ಸೋನಿಯಾ ಗಾಂಧಿ ಅವರ ಅಧಿಕಾರ ತ್ಯಾಗದ ಬಗ್ಗೆ ನಮಗೆ ಗೊತ್ತಿದೆ” ಎಂದು ಹೇಳಿದರು.
ನೀವು ಅನೇಕ ತ್ಯಾಗಗಳನ್ನು ಮಾಡಿದ್ದೀರಿ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಅಂತಹ ದೊಡ್ಡ ನಾಯಕನಾಗಲು ಆಗುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಕಾದುನೋಡೋಣ” ಎಂದರು.
ಗಾಂಧಿ ಹತ್ಯೆ ಬಗ್ಗೆ ನೆಹರೂ ಅವರ ಮೇಲೆ ಯತ್ನಾಳ್ ಅವರು ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, “ನಾನು ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಹೇಳಿಕೆಗಳು ಆ ಪಕ್ಷದ ಮನಸ್ಥಿತಿ ತೋರುತ್ತದೆ. ಅವರ ಹೇಳಿಕೆ ಬಗ್ಗೆ ಅವರ ಪಕ್ಷ ಉತ್ತರ ನೀಡಬೇಕು” ಎಂದರು.
ಕಾರ್ಯಕ್ರಮದ ಮೂಲಕ ಪಕ್ಷದಲ್ಲಿ ಒಗ್ಗಟ್ಟು ಮೂಡುವುದೇ ಎಂದು ಕೇಳಿದಾಗ, “ನಿಮಗೆ ತಲೆ ಕೆಟ್ಟಿದೆ. ನೀವು ಮಾಧ್ಯಮಗಳು ನಿಮ್ಮದೇ ಆದ ಘನತೆ ಗಳಿಸಿದ್ದೀರಿ. ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದವರು ಯಾರು? ಯಾರೋ ಹೇಳಿದ ಮಾತುಗಳಿಗೆ ನಾನು ಉತ್ತರ ನೀಡಲು ಆಗುವುದಿಲ್ಲ. ಯುವ ಪತ್ರಕರ್ತರು, ನಿಮ್ಮಲ್ಲಿರುವ ಹಿರಿಯರಿಂದ ಸರಿಯಾಗಿ ತರಬೇತಿ ಪಡೆಯಿರಿ” ಎಂದು ಮಾಧ್ಯಮದವರಿಗೆ ಕಿವಿಮಾತು ಹೇಳಿದರು.
ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಳಿದಾಗ, “ಈ ವಿಚಾರವಾಗಿ ಗೃಹಸಚಿವರು ಉತ್ತರ ನೀಡುತ್ತಾರೆ” ಎಂದರು.
ಮಹಾತ್ಮ ಗಾಂಧೀಜಿ ಭಾರತದ ಆತ್ಮ: ಡಿಸಿಎಂ ಡಿ.ಕೆ. ಶಿವಕುಮಾರ್:
ಹೆಗಲ ಮೇಲೆ ಕೇಸರಿ, ಬಿಳಿ, ಹಸಿರಿನ ಕಾಂಗ್ರೆಸ್ ಶಾಲಿದೆ. ಎದೆಯ ಒಳಗೆ ಪವಿತ್ರ ಸಂವಿಧಾನವಿದೆ:
“ಮಹಾತ್ಮ ಗಾಂಧೀಜಿ ಭಾರತದ ಆತ್ಮ. ವಿಶ್ವಕ್ಕೆ ಶಾಂತಿ, ಸಹಬಾಳ್ವೆ ಹೇಳಿಕೊಟ್ಟ ಪರಮಾತ್ಮ. ಇಂದು, ಮುಂದು, ಎಂದೆಂದೂ ನಮ್ಮದು ಗಾಂಧಿ ಮಂತ್ರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಶಿವಕುಮಾರ್ ಅವರು ದೇಶಕ್ಕೆ ಗಾಂಧೀಜಿ ಅವರ ಕೊಡುಗೆಯನ್ನು ಸ್ಮರಿಸಿದರು.
“ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು. ಈಗ ನೂರು ವರ್ಷಗಳ ನಂತರ ಈ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸಿ ಮುಂದಿನ ಪೀಳಿಗೆಗೆ ಗಾಂಧೀಜಿ ಅವರ ತತ್ವ, ಆದರ್ಶವನ್ನು ಸಾರಲು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
“ಇದು ದೇಶದ ಜನರು, ದೇಶದ ಐಕ್ಯತೆ, ಸಮಗ್ರತೆಗೆ ಗಾಂಧೀಜಿ, ಅಂಬೇಡ್ಕರ್ ಸ್ಮರಣೆ ಹಾಗೂ ಸಂವಿಧಾನ ರಕ್ಷಣೆ ಈ ಸಮಾವೇಶದ ಮುಖ್ಯ ಉದ್ದೇಶ. ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಇವು ಕೇವಲ ಘೋಷಣೆಗಳಲ್ಲ, ಭಾರತದ ಶಕ್ತಿ ಮಂತ್ರಗಳು. ಇತ್ತೀಚೆಗೆ ನಾವು ಸಂಕ್ರಾಂತಿ ಹಬ್ಬ ಆಚರಿಸಿದ್ದೇವೆ. ಸಂಕ್ರಾಂತಿ ಎಂದರೆ ಹೊಸತನ, ಹೊಸ ಹುರುಪು, ಹೊಸ ಉತ್ಸಾಹ” ಎಂದು ತಿಳಿಸಿದರು.
“ಅಂದು ಮಹಾತ್ಮ ಗಾಂಧೀಜಿ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕುಳಿತ ಸ್ಥಾನದಲ್ಲಿ ಇಂದು ಕನ್ನಡನಾಡಿನ ವರಪುತ್ರ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ” ಎಂದು ತಿಳಿಸಿದರು.
“1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಕ್ರಾಂತಿ ಆಗಿ, ಹುರುಪು ತಂದಿತ್ತು. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದರು. ಅಂಬೇಡ್ಕರ್ ಸಂವಿಧಾನ ಕೊಟ್ಟರು. ಗಾಂಧಿ ಭಾರತ ಎಂದರೆ ಸ್ವಾಭಿಮಾನಿಗಳ ಭಾರತ, ಏಕತೆಯ ಭಾರತ, ಸಾಮರಸ್ಯದ ಬದುಕಿನ ಭಾರತ, ಜಾತ್ಯತೀತ ಭಾರತ, ಸರ್ವೋದಯ ಭಾರತ” ಎಂದರು.
“ನೀವು ಕ್ರಾಂತಿಕಾರಿಯನ್ನು ಕೊಲ್ಲಬಹುದು, ಆದರೆ ಕ್ರಾಂತಿಯನ್ನು ಕೊಲ್ಲಲು ಆಗುವುದಿಲ್ಲ ಎಂದು ಗಾಂಧೀಜಿ ಅವರು ಹೇಳಿದ್ದಾರೆ. ವ್ಯಕ್ತಿ ಸಾಯಬಹುದು, ಆದರೆ ಅವರ ತತ್ವಗಳು ಸಾಯುವುದಿಲ್ಲ. ನನ್ನ ದೇಹವನ್ನು ನಾಶ ಮಾಡಬಹುದು, ಆದರೆ ನನ್ನ ಚಿಂತನೆಗಳನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಗಾಂಧಿ ಹೇಳಿದ್ದರು. ಪಾಪಗಳನ್ನು ನಾಶ ಮಾಡು, ಪಾಪಿಗಳನ್ನು ಪ್ರೀತಿಸು ಎಂದು ಗಾಂಧಿ ಹೇಳಿದ್ದಾರೆ” ಎಂದು ಗಾಂಧೀಜಿ ಅವರ ಸಂದೇಶಗಳನ್ನು ಸ್ಮರಿಸಿದರು.
“ನಮ್ಮ ಹೆಗಲ ಮೇಲೆ ಕೇಸರಿ, ಬಿಳಿ, ಹಸಿರಿನ ಕಾಂಗ್ರೆಸ್ ಶಾಲಿದೆ. ಎದೆಯ ಒಳಗೆ ಪವಿತ್ರ ಸಂವಿಧಾನವಿದೆ. ಇದನ್ನು ನಾವು ಮರೆಯಲು ಸಾಧ್ಯವಿಲ್ಲ. ಸಂವಿಧಾನವೇ ನಮ್ಮ ತಂದೆ ತಾಯಿ, ಸಂವಿಧಾನವೇ ನಮ್ಮ ಬಂಧು ಬಳಗ, ಸಂವಿಧಾನವೇ ನಮ್ಮ ಧರ್ಮಗ್ರಂಥ. ಭಗವದ್ಗೀತೆ, ಬೈಬಲ್, ಕುರಾನ್ ಧರ್ಮ ಗ್ರಂಥಗಳಂತೆ ನಮಗೆ ಶ್ರೇಷ್ಠ ಗ್ರಂಥ ನಮ್ಮ ಸಂವಿಧಾನ” ಎಂದು ತಿಳಿಸಿದರು.
“ನನ್ನ ದೇಹ ಸತ್ತರೂ ನಾನು ಭಾರತದ ಸಂವಿಧಾನದ ರೂಪದಲ್ಲಿ ಬದುಕಿರುತ್ತೇನೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಅವರು ಈಗ ಜೈ ಭೀಮ್ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ಸುಳ್ಳಿನ ವಿರುದ್ಧ ಹೋರಾಟ ಮಾಡಿದ ಮಹಾತ್ಮನ ವಿರುದ್ಧವೇ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ದುಷ್ಟರಿಂದ ಗಾಂಧಿ ಚಿಂತನೆಗಳನ್ನು ಉಳಿಸಬೇಕು. ಗೂಡ್ಸೆ ಚಿಂತನೆಗಳನ್ನು ನಾಶ ಮಾಡಬೇಕು. ಗಾಂಧೀಜಿ ತತ್ವಗಳನ್ನು ರಕ್ಷಿಸಬೇಕು” ಎಂದು ಕರೆ ನೀಡಿದರು.
“ಈ ಸಮಾವೇಶ ಇಲ್ಲಿಗೆ ನಿಲ್ಲಬಾರದು. ನಮ್ಮ ಸರ್ಕಾರ ಹಾಗೂ ಪಕ್ಷದ ವತಿಯಿಂದ ಇಡೀ ವರ್ಷ ಗಾಂಧಿ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ದೇಶದ ಪ್ರತಿ ತಾಲೂಕು ಮಟ್ಟದಲ್ಲಿ ಈ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಮಾಡಬೇಕು” ಎಂದು ತಿಳಿಸಿದರು.
“ಅಂದು ಹೇಗೆ ಗಾಂಧೀಜಿ ಸಮಾವೇಶ ನಡೆಸಿ ಜನರನ್ನು ಒಂದುಗೂಡಿಸಿದರೋ ಅದೇ ರೀತಿಯಲ್ಲೇ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿ ಮನಸ್ಸುಗಳನ್ನು ಒಂದುಗೂಡಿಸಿದ್ದಾರೆ. ಜನವರಿ 30 ರಂದು ಕೋಮುವಾದಿಗಳು ಗಾಂಧೀಜಿ ಅವರನ್ನು ಕೊಂದರು. ಆದರೆ ಅವರ ಮೌಲ್ಯ ಆದರ್ಶಗಳನ್ನು ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿದೆ” ಎಂದರು.
“1924 ರ ಸಮಾವೇಶ ಕರ್ನಾಟಕ ಏಕೀಕರಣಕ್ಕೂ ಶಕ್ತಿ ತುಂಬಿತ್ತು. ಈ ಸಮಾವೇಶ ಕರ್ನಾಟಕವನ್ನು ಕಟ್ಟಿತ್ತು. ಕನ್ನಡಿಗರನ್ನು ಒಂದುಗೂಡಿಸಿತ್ತು. ನಮಗೆ ಆರ್ಥಿಕ ಸ್ವಾತಂತ್ರ್ಯ ಬೇಕು. ಅದನ್ನು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ನೀಡಿದೆ. ಬಡತನದಿಂದ ಸ್ವಾತಂತ್ರ್ಯ ಬೇಕು. ಅದಕ್ಕಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆ ಮೂಲಕ ನುಡಿದಂತೆ ನಡೆದಿದ್ದೇವೆ. ನಾವೆಲ್ಲರೂ ಸೇರಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ – ಎಂಬ ಈ ಮೂರು ತತ್ವಗಳನ್ನು ಉಳಿಸೋಣ. ಭಾರತದ ಪ್ರಜಾಪ್ರಭುತ್ವವನ್ನು ಕಾಪಾಡೋಣ” ಎಂದು ತಿಳಿಸಿದರು.
“ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರದಾಸರ ಪದಗಳಂತೆ. ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ, ಜೈ ಕಾಂಗ್ರೆಸ್” ಎಂದು ತಿಳಿಸಿದರು.