ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಜಟಿಲವಾಗುತ್ತಿದ್ದು ಇದರ ತನಿಖೆಯನ್ನು ಸಿಐಡಿಗೆ ವಹಿಸುವುದು ಸೂಕ್ತ ಎಂದು ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಬೆಳಗಾವಿ, ಗೋಕಾಕ, ಸವದತ್ತಿ, ಹುಕ್ಕೇರಿ, ಬೈಲಹೊಂಗಲ ಸೇರಿದಂತೆ ವಿವಿಧೆಡೆ ಮೈಕ್ರೋ ಫೈನಾನ್ಸ್ ನವರು ಜನರಿಗೆ ಕಿರುಕುಳ ಕೊಡುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ವಾರದಲ್ಲಿ ಸಭೆ ನಡೆಸಲಾಗುವುದು. ಮೈಕ್ರೋ ಫೈನಾನ್ಸ್ ನವರು ಜನರಿಗೆ ತೊಂದರೆ ಕೊಟ್ಟರೆ ಪ್ರಕರಣ ದಾಖಲಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಕಿರುಕುಳ ಮತ್ತು ಅನ್ಯಾಯದ ವಿರುದ್ಧ ಜನತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಎಂದು ಅವರು ತಿಳಿಸಿದರು.