ಬೆಳಗಾವಿ : ಮೊದಲ ಪ್ರಧಾನಿ ಜವಾಹಾರಲಾಲ್ ನೆಹರೂ ಅವರು ಕೇವಲ ಪ್ರಧಾನಿಯಾಗಿ ಗುರುತಿಸಿಕೊಳ್ಳದೆ ದೇಶವನ್ನು ಪ್ರಪಂಚದಲ್ಲೇ ಅತ್ಯಂತ ಬಲಿಷ್ಟವಾಗಿ ಕಟ್ಟುವ ದಿಸೆಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ಬೆಳಗಾವಿ ಜಿಎ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಸ್.ಪಾಟೀಲ ಹೇಳಿದರು.
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜಿಎ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಶಕ್ಕೆ ಅತ್ಯಂತ ಬಲಿಷ್ಠವಾದ ಸಂವಿಧಾನ ಹಾಗೂ ಅತ್ಯುತ್ತಮ ಆರ್ಥಿಕತೆಯನ್ನು ನೀಡುವ ಮೂಲಕ ನೆಹರು ಅವರು ಸ್ವಾತಂತ್ರ್ಯದ ನಂತರ ದೇಶವನ್ನು ಕಟ್ಟಲು ಹಗಲು ರಾತ್ರಿ ಪಣತೊಟ್ಟರು. ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ಈ ಸಮಾಜಕ್ಕೆ ಏನು ಕೊಟ್ಟಿದೆ ಎನ್ನುವುದು ನೆಹರು ಅವರ ತತ್ವವಾಗಿತ್ತು. ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಒಬ್ಬ ಶ್ರೇಷ್ಠ ಆಡಳಿತಗಾರರಾಗಿ ನೆಹರು ಅವರು ಭಾರತವನ್ನು ಕಟ್ಟಿರುವ ರೀತಿ ನಿಬ್ಬೆರಗಾಗಿಸುವಂಥದ್ದು ಎಂದು ಅವರು ಹೇಳಿದರು.
ಸಿ.ಪಿ. ದೇವಋಷಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ನೈತಿಕ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದರು. ವೇದಿಕೆ ಮೇಲೆ ಅಲ್ಕಾ ಪಾಟೀಲ, ಪಾರ್ವತಿ ಚಿಮ್ಮಡ ಉಪಸ್ಥಿತರಿದ್ದರು. ಶಿಕ್ಷಕಿ ಶೋಭಿತ ವಿರುಪಾಕ್ಷಿ ನೆಹರುರ ಕುರಿತು ಮಾತನಾಡಿದರು. ರೇಖಾ ಜಕಾತಿ ನಿರೂಪಿಸಿದರು. ರಾಮಚಂದ್ರ ಮಗದುಮ್ಮ ಸ್ವಾಗತಿಸಿದರು. ಎ.ಬಿ. ಬಿಲ್ ವಂದಿಸಿದರು.