ಬೆಳಗಾವಿ: ಹುಕ್ಕೇರಿ ತಾಲೂಕಿನ ಸುಲ್ತಾನಪುರದ ಐದು ವರ್ಷದ ಗಂಡು ಮಗುವನ್ನು ಮಾರಿದ್ದ ಪ್ರಕರಣ ಭೇದಿಸಿದ ಹುಕ್ಕೇರಿ ಠಾಣೆ ಪೊಲೀಸರು, ಮಹಾರಾಷ್ಟ್ರದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ದೂರು ಆಧರಿಸಿ ತನಿಖೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ಪೊಲೀಸ್ ಇನ್ಸ್ಪೆಕ್ಟರ್ ಎಂ.ಕೆ.ಬಸಾಪುರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಕೊಲ್ಲಾಪುರ ಜಿಲ್ಲೆ ಗಡಹಿಂಗ್ಲಜ್ ತಾಲೂಕಿನ ಮಾದ್ಯಾಳದ ಸಂಗೀತಾ ಹಮ್ಮನ್ನವರ, ರತ್ನಾಗಿರಿ ಜಿಲ್ಲೆಯ ಚಿಪಳೂಣ ತಾಲೂಕಿನ ನಿವಳಿಯ ಮೋಹನ ತಾವಡೆ, ಆತನ ಪತ್ನಿ ಸಂಗೀತಾ ತಾವಡೆ ಬಂಧಿತರಾಗಿದ್ದಾರೆ. ಇನ್ನಿಬ್ಬರ ಪತ್ತೆಗೆ ಶೋಧ ಮುಂದುವರಿದಿದೆ. ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.
ಸುಲ್ತಾನಪುರದ ಅರ್ಚನಾ ಮಗದುಮ್ಮ ಮತ್ತು ರಾಜು ಮಗದುಮ್ಮ ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಅರ್ಚನಾಗೆ ಈ ಹಿಂದೆ ಜನಿಸಿದ್ದ ಮಗುವಿನ ಆರೋಗ್ಯ ಸರಿ ಇರಲಿಲ್ಲ. ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಸಂಗೀತಾ ಹಮ್ಮನ್ನವರ ಆ ಮಗುವನ್ನು ಕರೆದೊಯ್ದು, ಮೋಹನ ತಾವಡೆ, ಸಂಗೀತಾ ತಾವಡೆ ಮೂಲಕ ರತ್ನಾಗಿರಿ ಜಿಲ್ಲೆಯ ನಂದಕುಮಾರ ಮತ್ತು ನಂದಿನಿ ಡೋರ್ಲೇಕರ ದಂಪತಿಗೆ ರೂ. 3.50 ಲಕ್ಷಕ್ಕೆ ಮಾರಿದ್ದಳು. ಮಗುವಿನ ತಾಯಿ ಜನವರಿ 20ರಂದು ದಾಖಲಿಸಿದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಇಡೀ ಪ್ರಕರಣ ಬಯಲಾಗಿದೆ.