ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಬುಧವಾರ ಏರುಪೇರು ಕಂಡು ಬಂದಿದೆ. ಇದರಿಂದ ಅವರು ಇಡೀ ದಿನ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿಗೆ ಮೊರೆ ಹೋದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಬೆಂಬಲಿಸಿ, ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಒಂದು ಗಂಟೆ ಧರಣಿ ನಡೆಸಿ ಸದನದ ದೊಳಗೆ ಹೋದ ಅವರು ಕೆಲ ಸಮಯದ ನಂತರ ಬೆಳಗಾವಿಯ ಪ್ರವಾಸ ಮಂದಿರಕ್ಕೆ ಆಗಮಿಸಿ ವಿಶ್ರಾಂತಿ ಪಡೆದರು. ಬುಧವಾರ ಅವರು ಸದನದಿಂದ ದೂರ ಉಳಿದು ಪ್ರವಾಸಿ ಮಂದಿರದಲ್ಲಿ ಇಡೀ ದಿನ ವಿಶ್ರಾಂತಿ ಪಡೆದರು.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಪ್ರವಾಸಿ ಮಂದಿರಕ್ಕೆ ಆಗಮಿಸಿ ಅವರ ಆರೋಗ್ಯ ವಿಚಾರಿಸಿದರು. ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ವಿಧಾನಪರಿಷತ್ ಸದಸ್ಯ ಯತೀಂದ್ರ ಅವರು ಸಹ ಆರೋಗ್ಯ ವಿಚಾರಿಸಿದರು. ಸಚಿವ ಭೈರತಿ ಸುರೇಶ್ ಮಾತನಾಡಿ ಮುಖ್ಯಮಂತ್ರಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಾನು ಅವರ ಜೊತೆ ಊಟ ಮಾಡಿ ಬಂದಿದ್ದು ಆರೋಗ್ಯ ಸುಧಾರಣೆ ಆಗಿದೆ. ಗುರುವಾರ ಸದನದಲ್ಲಿ ಅವರು ನೀಡಬೇಕಾದ ವಿಷಯಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದರು.


