ಬೆಂಗಳೂರು: ನನಗೆ ಅಂತರ್ಜಾತಿ ವಿವಾಹವಾಗುವ ಕನಸಿತ್ತು, ಆದರೆ ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಾಲೇಜು ದಿನಗಳ ಪ್ರೇಮ ಪ್ರಸಂಗವನ್ನು ನೆನಪಿಸಿಕೊಂಡರು.
ಜನಸ್ಪಂದನ ಟ್ರಸ್ಟ್ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಎಂದುಕೊಂಡಿದ್ದೆ. ತಪ್ಪಾಗಿ ತಿಳಿಯಬೇಡಿ, ಸ್ನೇಹವಿತ್ತು ಅಷ್ಟೇ. ಆದರೆ ಹುಡುಗಿಯು ಒಪ್ಪಲಿಲ್ಲ, ಅವರ ಮನೆಯವರು ಒಪ್ಪಲಿಲ್ಲ. ಕೊನೆಗೆ ನಮ್ಮ ಜನಾಂಗದ ಹುಡುಗಿಯನ್ನೇ ಮದುವೆ ಆಗಬೇಕಾಯಿತು ಎಂದು ಕಾಲೇಜು ಜೀವನದಲ್ಲಿ ಎದುರಾದ ತಮ್ಮ ಪ್ರೇಮ ಪ್ರಸಂಗವನ್ನು ಮುಖ್ಯಮಂತ್ರಿ ನೆನಪಿಸಿಕೊಂಡರು.
ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ. ನಮ್ಮ ಸರಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮ ಜಾರಿ ಮಾಡಿದೆ. ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಅಂತರ್ಜಾತಿ ವಿವಾಹ ಹೆಚ್ಚು ಹೆಚ್ಚು ನಡೆಯಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.