ಬೆಳಗಾವಿ : ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಖಾನಾಪುರ ತಾಲೂಕಿನಿಂದ ಈ ಸಲ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಖಾನಾಪುರ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಸಭೆಯಲ್ಲಿ ಯಶವಂತ ಬಿರ್ಜೆ ಅವರು ಈ ಬಗ್ಗೆ ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ವಿಠ್ಠಲ ಹಲಗೇಕರ ಮತ್ತು ರಾಜು ಸಿದ್ದಾಣಿ ಅವರಲ್ಲಿ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ವಿಶೇಷ ಆಯ್ಕೆ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಖಾನಾಪುರ ತಾಲೂಕಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಹೊಸ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಇತರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಕಂಡು ಹುಡುಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇದೇ ರೀತಿ ಆಯ್ಕೆ ಸಮಿತಿ ರಚಿಸಿ ಕಳೆದ ಸಲ ಉತ್ತಮ ಸ್ಪರ್ಧೆ ನೀಡಿದ್ದೆವು. ಈ ಸಲ ನಾವು ಐದು ವರ್ಷಗಳಿಂದ ನಿರ್ದೇಶಕ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದೇವೆ. ತಾಲೂಕಿನ ಸಹಕಾರಿ ಸಂಘಗಳು ಹಲವು ಸಮಸ್ಯೆ ಎದುರಿಸುತ್ತಿರುವುದರಿಂದ ಈ ಬಾರಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ರಾಜು ಸಿದ್ಧಾಣಿ ಮಾತನಾಡಿ, ಕಳೆದ 20 ವರ್ಷಗಳಿಂದ ಖಾನಾಪುರ ತಾಲೂಕಿನ ಸಹಕಾರ ಸಂಘಗಳಲ್ಲಿ ಯಾವುದೇ ರೀತಿಯ ವಿಶೇಷ ಅಭಿವೃದ್ಧಿ ನಡೆದಿಲ್ಲ. ಕೆಲ ಸಂಘಗಳು ಚಟುವಟಿಕೆಗಳನ್ನು ನಿಲ್ಲಿಸಿದ್ದು ರೈತರು ಮತ್ತು ಸದಸ್ಯರಿಗೆ ಬಹಳ ನಷ್ಟವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗುತ್ತಿದ್ದೇವೆ. ಈ ಬಗ್ಗೆ ಎಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದು ತಿಳಿಸಿದರು.
ಚನ್ನರಾಜ ಹಟ್ಟಿಹೊಳಿ ಮಾತನಾಡಿ ಈ ಸಲದ ಚುನಾವಣೆಯಲ್ಲಿ ಖಾನಾಪುರ ತಾಲೂಕಿನ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಯಾವ ಸಂದೇಹವು ಇಲ್ಲ ಎಂದು ತಿಳಿಸಿದರು.
ಶಿವಸೇನೆ ಮುಖ್ಯಸ್ಥ ಕೆ.ಪಿ. ಪಾಟೀಲ, ಬರಮಾಣಿ ಪಾಟೀಲ, ಶ್ರೀಶೈಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.