ರಾಮನಗರ:
“ಭಾರತ ಜೋಡೊ ಪಾದಯಾತ್ರೆಯ ಶ್ರಮ ಕರ್ನಾಟಕದಲ್ಲಿ ಫಲ ನೀಡಿತು. ಸುಮಾರು 500 ಕಿಲೋ ಮೀಟರ್ ಪಾದಯಾತ್ರೆ ಕರ್ನಾಟಕದಲ್ಲಿ ಸಾಗಿದ ಪರಿಣಾಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಜೋಡೋ ಯಾತ್ರೆಗೆ ಒಂದು ವರ್ಷ ತುಂಬಿದ ನೆನಪಿನಲ್ಲಿ ರಾಮನಗರದಲ್ಲಿ ನಡೆದ ಪಾದಯಾತ್ರೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು:
“ದೇಶದ ಸಮಗ್ರತೆ, ಐಕ್ಯತೆ, ಶಾಂತಿ ಕಾಪಾಡಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಪಾದಯಾತ್ರೆ ಮಾಡಿದ ಪರಿಣಾಮ ಇಂದು ನಾವು ದೇಶದಲ್ಲಿ ಬದಲಾವಣೆ ಕಾಣುತ್ತಿದ್ದೇವೆ.
ಕಾಂಗ್ರೆಸ್ ಪಕ್ಷ ಈ ದೇಶದ ಶಕ್ತಿ, ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರು ಅಧಿಕಾರಕ್ಕೆ ಬಂದಂತೆ. ಅಧಿಕಾರಕ್ಕೆ ಬಂದ ತಕ್ಷಣ ಆರ್ಥಿಕವಾಗಿ ನಮ್ಮ ಜನರನ್ನು ಸದೃಡ ಮಾಡುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಇದು ನಿಜವಾದ ಬದಲಾವಣೆ.
ತುರುವೇಕೆರೆ ಹೊರತು ಪಡಿಸಿ ಭಾರತ ಜೋಡೊ ಯಾತ್ರೆ ಹೆಜ್ಜೆ ಹಾಕಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.
ಭಾರತ ಜೋಡೊ ಯಾತ್ರೆಗೂ ಮುಂಚಿತವಾಗಿ ಮೇಕೆದಾಟು ಪಾದಯಾತ್ರೆ ಮಾಡಿದೆವು ಬೆಂಗಳೂರಿನ ಪದ್ಮನಾಭನಗರ ಹೊರತು ಪಡಿಸಿ ಕನಕಪುರ, ರಾಮನಗರ, ಮಾಗಡಿ, ಸೇರಿದಂತೆ ಈ ಪಾದಯಾತ್ರೆ ಹೆಜ್ಜೆ ಹಾಕಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.
*ಅತ್ತೆ ಸೊಸೆಗೆ ಜಗಳ ತಂದಿಟ್ಟ ಬಿಜೆಪಿ*
ನಾವು ಅಧಿಕಾರಕ್ಕೆ ಬಂದು 3 ದಿನಗಳು ಆಗಿರಲಿಲ್ಲ, ಆಗಲೇ ಗ್ಯಾರಂಟಿ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದರು. ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ ಸೊಸೆಗೆ ಜಗಳ ಎಂದು ಸುಳ್ಳು ಸುದ್ದಿ ಹಬ್ಬಿಸಿದರು.
80 ಜನ ಶಾಸಕರ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು, ಆಗ ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡಿದ್ದರು. ಆದರೆ ಈಗ ವಿರೋಧ ಮಾಡುತ್ತಿದ್ದಾರೆ. ಅಲ್ಲಿನ ಜನರು ರಾಮನಗರದ ಪ್ರಜೆಗಳಲ್ಲವೇ? ಏಕೆ ರಾಜಕೀಯ ಮಾಡುತ್ತಾ ಇದ್ದೀರಿ?
ಕಳೆದ ವರ್ಷ ನೆರೆ ಬಂದು ರೇಷ್ಮೆಯ ಕಾರ್ಖಾನೆಗಳು ಕೊಚ್ಚಿ ಹೋದವು ನೀವು ಒಂದೇ ಒಂದು ರುಪಾಯಿ ಪರಿಹಾರ ತಂದು ಕೊಡಲು ಆಗಲಿಲ್ಲ. ನಾವು ಪ್ರಸ್ತುತ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದು ಸೂಕ್ತ ಪರಿಹಾರವನ್ನು ಸಂತ್ರಸ್ತರಿಗೆ ನೀಡುತ್ತೇವೆ.
ರಾಮನಗರ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಬಿಟ್ಟರೆ ಯಾರೂ ಗೆಲ್ಲುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ವರ್ಷ ಮಾಗಡಿ ಹಾಗೂ ರಾಮನಗರದಲ್ಲಿ ನಮ್ಮ ಶಾಸಕರನ್ನು ಗೆಲ್ಲಿಸಿದ್ದೀರಿ ನಿಮಗೆ ಶಕ್ತಿ ತುಂಬುವ ಕೆಲಸ ನಾವು ಮಾಡುತ್ತೇವೆ.
ಮಾಗಡಿಯ ಬಾಲಕೃಷ್ಣ ಅವರು, ಇಕ್ಬಾಲ್ ಹುಸೇನ್ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಇಡೀ ರಾಜ್ಯದಲ್ಲಿ ರಾಮನಗರವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ.
ಮೇಕೆದಾಟು ಪಾದಯಾತ್ರೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಜ್ಜೆ ಹಾಕಿದ್ದರು ಇಂದು ಮತ್ತೆ ಹೆಜ್ಜೆ ಹಾಕಿದ್ದಾರೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಅಲ್ಲ, ಈ ರಾಜ್ಯದ ಜನಸಾಮಾನ್ಯರ ಪಾದಯಾತ್ರೆ.”