ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಜಾಲತಾಣ(ವೆಬ್ಸೈಟ್) ಬಿಡುಗಡೆ ಹಮ್ಮಿಕೊಳ್ಳಲಾಗಿತ್ತು. ರಾಚವಿ ಕುಲಪತಿ ಪ್ರೊ. ರಾಮಚಂದ್ರ ಗೌಡ ಅವರು ಮಹಾವಿದ್ಯಾಲಯದ ಜಾಲತಾಣವನ್ನು ಬಿಡುಗಡೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಮಹಾವಿದ್ಯಾಲಯಕ್ಕೆ ಜಾಲತಾಣದ ಅವಶ್ಯಕತೆ ತುರ್ತಾಗಿತ್ತು. ಅದು ಈಗ ಈಡೇರಿರುವುದರಿಂದ ಮಹಾವಿದ್ಯಾಲಯವು ಹೊರ ಜಗತ್ತಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಮಹಾವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆಗೆ ಇನ್ನಷ್ಟು ಪುಷ್ಟಿ ಸಿಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಹಾವಿದ್ಯಾಲಯದ ಕುರಿತು ಮಾಹಿತಿ ತಾವಿದ್ದಲ್ಲಿಯೇ ಪಡೆದುಕೊಳ್ಳಬಹುದು. ಈ ಜಾಲತಾಣ ಮಹಾವಿದ್ಯಾಲಯ ಮತ್ತು ಸಮಾಜದ ನಡುವೆ ಕೊಂಡಿಯಾಗಲಿದೆ ಎಂದು ಜಾಲತಾಣದ ಮಹತ್ವದ ಕುರಿತು ವಿವರಿಸಿದರು.
ವಿಶ್ವವಿದ್ಯಾಲಯದ ಕುಲ ಸಚಿವೆ ರಾಜಶ್ರೀ ಜೈನಾಪುರೆ, ಮೌಲ್ಯಮಾಪನ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ, ವಿತ್ತಾಧಿಕಾರಿ ಪ್ರೊ. ಎಸ್. ಬಿ. ಆಕಾಶ್, ವಿವಿಯ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ. ಎಸ್. ಎಂ. ಗಂಗಾಧರಯ್ಯ, ವಿದ್ಯಾರ್ಥಿ ಉದ್ಯೋಗ ಕೋಶದ ಅಧಿಕಾರಿ ಪ್ರೊ ಆರ್. ಎನ್. ಮನಗೂಳಿ, ಐಕ್ಯೂಎಸಿ ಸಂಯೋಜಕ ಡಾ. ಮುಕುಂದ ಮುಂಡರಗಿ, ಜಾಲತಾಣದ ನಿರ್ವಹಣಾಧಿಕಾರಿ ಡಾ. ಬಾಲಾಜಿ ಆಳಂದೆ, ಡಾ. ಮಹಾಂತೇಶ ಕುರಿ ತಾಂತ್ರಿಕ ಸಲಹೆಗಾರ ಸಂತೋಷ ರಜಪೂತ್, ಚೇತನ್ ಗಂಗಾಯಿ ಹಾಗೂ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್ ಎಸ್ ತೇರದಾಳ ಸ್ವಾಗತಿಸಿದರು. ಡಾ. ಜ್ಯೋತಿ ಪಾಟೀಲ ನಿರೂಪಿಸಿದರು, ಡಾ. ಅರ್ಜುನ ಜಂಬಗಿ ವಂದಿಸಿದರು.