ನವದೆಹಲಿ: ಸೋಮವಾರ (ಫೆಬ್ರವರಿ 24) ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಬಾಂಗ್ಲಾದೇಶವನ್ನು 5 ವಿಕೆಟ್ಗಳಿಂದ ಸೋಲಿಸಿದ ನಂತರ ಭಾರತವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಸೆಮಿಫೈನಲ್ಗೆ ಪ್ರವೇಶಿಸಿದೆ ಮತ್ತು ಹಾಲಿ ಚಾಂಪಿಯನ್ ಪಾಕಿಸ್ತಾನವು ಟೂರ್ನಿಯಿಂದ ಹೊರಬಿದ್ದಿದೆ.
29 ವರ್ಷಗಳ ನಂತರ ತವರಿನಲ್ಲಿ ನಡೆದ ಮೊದಲ ಐಸಿಸಿ (ICC) ಟೂರ್ನಮೆಂಟ್ನಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನವು ಗುಂಪು ಹಂತಗಳಲ್ಲೇ ಹೊರಬಿದ್ದಿರುವುದು ಅದಕ್ಕೆ ದೊಡ್ಡ ಮುಜುಗರಕ್ಕೆ ಕಾರಣವಾಗಿದೆ. ಟೂರ್ನಿಯ ಆರನೇ ಪಂದ್ಯವು ರಾವಲ್ಪಿಂಡಿಯಲ್ಲಿ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯಿತು. ಮುಂದಿನ ಸುತ್ತಿಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಈ ಪಂದ್ಯವೂ ಕೂಡ ಈ ಗುಂಪಿನಲ್ಲಿರುವ 3 ತಂಡಗಳಿಗೆ ಪ್ರಮುಖವಾಗಿತ್ತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಬಾಂಗ್ಲಾದೇಶವನ್ನು 5 ವಿಕೆಟ್ಗಳಿಂದ ಸೋಲಿಸಿದ ನಂತರ ಸೆಮಿ ಫೈನಲ್ಗೆ ಹೋಗುವ ತಂಡಗಳು ಯಾವುವು ಎಂಬುದು ನಿರ್ಧಾರವಾಗಿದ್ದು, ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದರೆ, ಸೋತ ಬಾಂಗ್ಲಾದೇಶ ಹಾಗೂ ಆತಿಥೇಯ ಪಾಕಿಸ್ತಾನವನ್ನು ಟೂರ್ನಿಯಿಂದ ಹೊರಬಿದ್ದಿವೆ.
2025 ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪ್ರವೇಶಿಸಲು ಅತ್ಯಂತ ಸಣ್ಣ ಅವಕಾಶವಿದ್ದ ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶ ಬಾಂಗ್ಲಾದೇಶದ ಪರವಾಗಿ ಬರಬೇಕಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನದ ಆಸೆಗೆ ತಣ್ಣೀರೆರಚಿದೆ. ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಈ ಟೂರ್ನಿಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನ ತಂಡಕ್ಕೆ ದೊಡ್ಡ ಮುಖಭಂಗವಾಗಿದೆ.
ಸೆಮಿಫೈನಲ್ಗೆ ಪ್ರವೇಶಿಸಲು ನ್ಯೂಜಿಲೆಂಡ್ಗೆ ಗೆಲುವಿನ ಅಗತ್ಯವಿತ್ತು ಮತ್ತು ರಚಿನ್ ರವೀಂದ್ರ ಅವರ 4 ನೇ ಶತಕದಿಂದಾಗಿ ಬಾಂಗ್ಲಾದೇಶದ ಕಠಿಣ ಪರೀಕ್ಷೆಯನ್ನು ಸುಲಭವಾಗಿ ಜಯಿಸಲು ಸಾಧ್ಯವಾಯಿತು. ಬಾಂಗ್ಲಾದೇಶ ದಿನದಂದು ಅದ್ಭುತವಾಗಿ ಪ್ರಾರಂಭಿಸಿತು, ಆದರೆ ಮೈಕೆಲ್ ಬ್ರೇಸ್ವೆಲ್ ದಾಳಿಗೆ ಕುಸಿಯಿತು. ಬ್ರೇಸ್ವೆಲ್ 10 ಓವರ್ಗಳಲ್ಲಿ 26 ರನ್ಗಳಿಗೆ 4 ವಿಕೆಟ್ ಪಡೆದರು. ಬಾಂಗ್ಲಾದೇಶ ಪರ ನಜಿಮುಲ್ ಶಾಂಟೊ 77 ರನ್ ಗಳಿಸಿದರೆ, ಜೇಕರ್ ಅಲಿ 45 ರನ್ ಗಳಿಸಿ 50 ಓವರ್ಗಳಲ್ಲಿ 9 ವಿಕೆಟ್ಗೆ 236 ರನ್ ಗಳಿಸಿದರು.
ನಿಗದಿತ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ವಿಲ್ ಯಂಗ್ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ಬೇಗನೆ ಕಳೆದುಕೊಂಡಿತು. ಆದರೆ ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ 57 ರನ್ ಜೊತೆಯಾಟವಾಡಿ ತಂಡವನ್ನು ಸ್ಥಿರಗೊಳಿಸಿದರು. ನಂತರ ಬಂದ ಟಾಮ್ ಲ್ಯಾಥಮ್ ಪಂದ್ಯಾವಳಿಯಲ್ಲಿ 55 ರನ್ಗಳಿಸಿದರು. ಈ ಸೋಲಿನಿಂದಾಗಿ ಬಾಂಗ್ಲಾದೇಶವು ಇದುವರೆಗೆ ಆಡಿದ 2 ಪಂದ್ಯಗಳನ್ನು ಸೋತಿದ್ದರಿಂದ ಸ್ಪರ್ಧೆಯಿಂದ ಹೊರಬಿತ್ತು.