ಧಾರವಾಡ/ಬೆಳಗಾವಿ:
ದೇಶದಲ್ಲಿ ಶೇ 86ರಷ್ಟು ನೀರು ಕೃಷಿಗೆ ಮಾತ್ರ ಬಳಕೆ ಆಗುತ್ತಿದ್ದು, ಕೂಡಲೇ ಈ ಹೆಚ್ಚುವರಿ ಶೇಕಡಾ ಬಳಕೆ ನಿಲ್ಲಿಸಬೇಕಿದೆ ಎಂದು ಕೇಂದ್ರ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಿಇಓ ಡಾ. ಅಶೋಕ ದಳವಾಯಿ ಕರೆ ನೀಡಿದ್ದಾರೆ.
ಇಂದು ಧಾರವಾಡದ ನೀರು ಮತ್ತು ಭೂ ವ್ಯವಸ್ಥಾಪನ ಸಂಸ್ಥೆ(Walmi)ಯಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ವತಿಯಿಂದ ಆಯೋಜಿಸಲಾದ ನೀರು ನಿರ್ವಹಣೆ & ಹವಾಮಾನ ಬದಲಾವಣೆ ಅಂತಾರಾಷ್ಟ್ರೀಯ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಾಶ್ಚಾತ್ಯ ದೇಶಗಳ್ಲಿ ಗರಿಷ್ಠ ವೆಂದರೆ ಶೇ. 70 ರಷ್ಟು ಮಾತ್ರ ಕೃಷಿಗೆ ನೀರು ಬಳಸುತ್ತಾರೆ. ಆದರೆ ಭಾರತದಲ್ಲಿ ಅದರ ಪ್ರಮಾಣ ಶೇ. 86ರಷ್ಟು ಇದೆ. ಭಾರತದಲ್ಲಿ ಕೃಷಿಗೆ ಬಳಕೆಯಾಗುತ್ತಿರುವ ಈ ಹೆಚ್ಚುವರಿ ಶೇ.16ರಷ್ಟು ನೀರನ್ನು ಜನರ ದಿನನಿತ್ಯ ಜೀವನಕ್ಕೆ, ಸೇವಾ ಹಾಗೂ ಉದ್ಯೋಗ ಕ್ಷೇತ್ರಕ್ಕೆ ಉಳಿಸಿಕೊಡಬೇಕಿದೆ ಎಂದು ಡಾ. ದಳವಾಯಿ ಕರೆ ನೀಡಿದರು.
ಕುಡಿಯಲು ಮತ್ತು ಉದ್ಯೋಗವಲಯದ ಬೆಳವಣಿಗೆಗೆ ನೀರು ಕೃಷಿ ಕ್ಷೇತ್ರದಿಂದ ಉಳಿಸಿ ಕೊಡದಿದ್ದರೆ ನೀರಿನ ಭಾರಿ ಕೊರತೆ ದೇಶದಲ್ಲಿ ಉಂಟಾಗಲಿದೆ ಎಂದರು.
12ಸಾವಿರ ವರ್ಷಗಳ ಹಿಂದಿನಿಂದ ಬೆಳೆದುಬಂದ ನಾಗರಿಕತೆ, ಅಂದಿನಿಂದ ಕೃಷಿ ನಮ್ಮ ಉದ್ಯೋಗ. ಆದರೆ ಇಂದಿನ ಭಾರತದ
142ಕೋಟಿ ಜನಸಂಖ್ಯೆಗೆ ಉದ್ಯೋಗ ಸೃಷ್ಟಿ ಮಾಡಿಕೊಡುವ ಶಕ್ತಿ ಕೃಷಿ ಕ್ಷೇತ್ರಕ್ಕೆ ಇಲ್ಲ.
ಶೇ. 48ರಷ್ಟು ಜನ ಭಾರತದಲ್ಲಿ ಕೃಷಿ ಮಾಡುತ್ತಾರೆ. ರೈತರಿಗೆ ಇಂದು ಕನಿಷ್ಠ ಜೀವನ ಸಾಗಿಸಲು ಸಹ ಸಾಕಷ್ಟು ಆದಾಯ ಕೃಷಿ ಕ್ಷೇತ್ರದಿಂದ ಸಿಗದೇ ಇರುವುದು ಕಳವಳಕಾರಿ.
ರೈತನ ಕುಟುಂಬಕ್ಕೆ ಇಂದು ತಿಂಗಳಿಗೆ ಬರೀ 10ಸಾವಿರ ಮಾತ್ರ ಆದಾಯ ಬರುತ್ತಿದೆ. ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಗುಮಾಸ್ತ ದರ್ಜೆಯವನಿಗೆ ಕನಿಷ್ಠ 18 ಸಾವಿರ ತಿಂಗಳಿಗೆ ಆದಾಯ ಬರುತ್ತದೆ ಎಂಬುವುದು ಗಮನಾರ್ಹ. ರಾಯತರ ಜೀವನಕ್ಕೆ ತಿಂಗಳ ಆದಾಯ ಏನೂ ಸಿಗುತ್ತಿಲ್ಲ. ರೈತರು ನೀರಿನ ಸದ್ಭಳಕೆ ಮಾಡಿಕೊಂಡರೆ ಮಾತ್ರ ಅವರ ಆದಾಯ ಹೆಚ್ಚಿ ಜೀವನ ಸುಗಮವಾಗಲು ಸಾಧ್ಯವಾಗುತ್ತದೆ ಎಂದರು.
ಮಾನ್ಸೂನ್ ಕೃಷಿ ಅವಲಂಬಿಸಿರುವ ಭಾರತದಲ್ಲಿ ಕೃಷಿಕರಿಗೆ ವರ್ಷದಲ್ಲಿ185 ದಿವಸ ಮಾತ್ರ ಉದ್ಯೋಗ ಸಿಗುತ್ತೆದೆ. ಉಳಿದ ಸಮಯ ರೈತರು ಉದ್ಯೋಗವಿಲ್ಲದೇ ಇರಬೇಕಾದದ್ದು ದುಖಃಕರ ಎಂದರು.
ಕೃಷಿ ಜೊತೆಗೆ ಇತರ ಆರ್ಥಿಕ ಉದ್ಯೋಗಗಳ ಸೃಷ್ಟಿಯನ್ನು ರೈತವಲಯಕ್ಕೆ ಮಾಡಿಕೊಡುವ ಅಗತ್ಯವಿದೆ. ಆದರೆ ನೀರಿಲ್ಲದೇ ಉದ್ಯೋಗ ಸೃಷ್ಟಿ ಸಾಧ್ಯವೇ ಇಲ್ಲ.
ಉದ್ಯೋಗ ಸೃಷ್ಟಿಗೆ ನೀರು ಬೇಕೆ ಬೇಕು. ನೀರಿನ ಸದ್ಭಳಕೆ ಕೃಷಿಗೆ ಬಹುಪಯೋಗಿ ಆಗಲಿದೆ.
ಇಂದು ಕೃಷಿಗೆ ಬಳಸಲಾಗುತ್ತಿರುವ ಶೇ. 86ರ ನೀರನ್ನು ಏನಿಲ್ಲವೆಂದರೂ ಶೇ. 15ರಷ್ಟು ಕಡಿಮೆ ಬಳಕೆ ಮಾಡಬೇಕು.
ಉಳಿಕೆಯಾದ ಶೇ. 15ನೀರನ್ನು ಸೇವಾ ಹಾಗೂ ಉದ್ಯೋಗ ರಂಗಕ್ಕೆ ಕೊಡಬೇಕು ಎಂದು ರೈತರಿಗೆ ಕರೆ ನೀಡಿದರು.
ಹನಿ ನೀರಾವರಿ(ಮೈಕ್ರೋ ಇರಿಗೇಷನ್) ಬಳಕೆಗೆ ಬರಬೇಕು. ಇದರಿಂದ ಬೆಳೆಯ ಇಳುವರಿ ಹೆಚ್ಚಿ ನೀರು ಉಳಿತಾಯವಾಗಿ, ಮಣ್ಣು ಸವೆತ ನಿಲ್ಲುತ್ತದೆ. ಮಣ್ಣುಸ್ನೇಹಿ ಎರೆಹುಳುವಿನಂತಹ ಹುಳುಗಳು ಸಹ ಬದುಕುತ್ತವೆ ಇದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಿ, ರಾಸಾಯನ ರಹಿತ ಆರೋಗ್ಯಕರ ಬೆಳೆ ಬರುತ್ತದೆ ಎಂದರು.
1947ರಿಂದೀಚೆಗೆ 830 ಲಕ್ಷ ಹೆಕ್ಟ್ವೇರ್ ಜಮೀನಿಗೆ ನೀರು ಒದಗಿಸುವ ಉದ್ದೇಶದಿಂದ ಹಲವಾರು ಅಣೆಕಟ್ಟುಗಳನ್ನು ದೇಶದಲ್ಲಿ ಕಟ್ಟಿದ್ದೇವೆ. ಆದರೆ ಇಂದು ದೇಶದ ಎಲ್ಲ ಅಣೆಕಟ್ಟೆಗಳೂ ಸೇರಿ
630 ಲಕ್ಷ ಹೆಕ್ಟ್ವೇರ್ ಜಮೀನಿಗೆ ಮಾತ್ರ ನೀರು ಒದಗಿಸಲು ಸಾಧ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎರ್ರಾಬಿರ್ರಿ ನೀರನ್ನು ಕೃಷಿಗೆ ಬಳಸುವುದನ್ನು ತಡೆಯಲು ರೈತರು ಪ್ರಯತ್ನಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಕೃಷಿ ವಿಶ್ವ ವಿದ್ಯಾಲಯಗಳ ಯೋಜನೆಗಳ ಮಾಹಿತಿ ಪಡೆಯಬೇಕು ಎಂದು ಕರೆ ನೀಡಿದರು.
ಸಭಾಪತಿ ಬಸವರಾಜ ಹೊರಟ್ಟಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಾಲ್ಮಿ ನಿರ್ದೇಶಕ ರಾಜೇಂದ್ರ ಪೊದ್ದಾರ ಹಾಗೂ ದೇಶ ವಿದೇಶಗಳ ನೀರಾವರಿ ತಜ್ಞರು, ಕೃಷಿ ಮತ್ತು ಪರಿಸರ ವಿಜ್ಞಾನಿಗಳು ಭಾಗವಹಿಸಿದ್ದರು.