ಬೆಳಗಾವಿ : ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡಗಳ ನಡುವೆ ನೂತನ ರೈಲು ಮಾರ್ಗ ನಿರ್ಮಾಣದ ಮುಂಚಿತವಾಗಿ ನಡೆಸಲಾಗುವ “ಸಾಮಾನ್ಯ ಸಮೀಕ್ಷೆ” ವಿಷಯವನ್ನು ಮತ್ತೊಮ್ಮೆ ಅಂದರೆ ಪುನರ್ ಪರಿಶೀಲನೆ ಮಾಡುವ ಬಗ್ಗೆ ಸ್ಪಷ್ಟ ನಿರ್ದೇಶವನ್ನು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೇಲ್ವೆ ಬೋರ್ಡ್ ಗೆ ಸಂಬಂಧಿಸಿದ ವಿಭಾಗಕ್ಕೆ ನೀಡಲಾದ ಕುರಿತು ಪತ್ರ ಬರೆದು ತಮಗೆ ತಿಳಿಸಿದ ಬಗ್ಗೆ ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸಂತಸ ವ್ಯಕ್ತ ಪಡಿಸಿಸಿದ್ದಾರೆ.
ಪ್ರಸ್ತಾಪಿತ ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡಗಳ ನಡುವೆ ನೂತನ ರೈಲು ಮಾರ್ಗ ನಿರ್ಮಾಣದ ಬಗ್ಗೆ ಈ ಮೊದಲು ರೇಲ್ವೆ ಅಧಿಕಾರಿಗಳು, ಕರೋನಾ-19 (ಮಹಾಮಾರಿ) ಸಮಯದಲ್ಲಿ ಸಾಮಾನ್ಯ ಸಮೀಕ್ಷೆ ನಡೆಸಿ, ತದನಂತರ ಈ ಮಾರ್ಗ ನಿರ್ಮಾಣ ಕಾರ್ಯಸಾಧ್ಯತೆ ಅನುಮಾನದಾಯಕವೆಂದು ಉಲ್ಲೇಖಿಸಿ ವರದಿ ನೀಡಿದ್ದು ಇಲ್ಲಿ ಸ್ಮರಣೀಯ.
ಆದರೆ ಬೆಳಗಾವಿ ಸಂಸದರಾಗಿ ಚುನಾಯಿತಗೊಂಡ ನಂತರದಲ್ಲಿ ಈ ನೂತನ ಮಾರ್ಗ ನಿರ್ಮಾಣದ ಬಗ್ಗೆ ಸತ್ಯಾಸತ್ಯತೆಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದು ಈ ಮಾರ್ಗ ನಿರ್ಮಾಣ ಅತೀ ಅವಶ್ಯಕವಾಗಿದ್ದು, ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕೆಂದು ಪ್ರತಿ ವರ್ಷ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಇದು ಖಂಡಿತವಾಗಿ ಅನುಕೂಲಕರವಾಗಲಿದೆ ಎಂದು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ಇವರ ಉಪಸ್ಥಿತಿಯಲ್ಲಿ ಮತ್ತು ಅವರ ಸಹಕಾರದೊಂದಿಗೆ ಇದರ ಮನವರಿಕೆಯನ್ನು ಯಶಸ್ವಿಯಾಗಿ ಮಾಡಿಕೊಟ್ಟ ಪರಿಣಾಮವಾಗಿ ಸದ್ಯ ರೇಲ್ವೆ ಬೋರ್ಡ್ ಸಂಬಂಧಿಸಿದ ವಿಭಾಗಕ್ಕೆ ಈ ಪ್ರಸ್ತಾಪಿತ ಮಾರ್ಗದಲ್ಲಿ ಸಾಮಾನ್ಯ ಸಮೀಕ್ಷೆ ನಡೆಸುವ ಬಗ್ಗೆ ವಿಷಯ ಪರಿಗಣಿಸುವ ಕುರಿತು ಸ್ಪಷ್ಟ ನಿರ್ದೇಶನ ನೀಡಿದೆ. ಈ ಹಿನ್ನಲೆಯಲ್ಲಿ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅಭಿಪ್ರಾಯ ವ್ಯಕ್ತ ಪಡಿಸಿಸುತ್ತಾ, ಈ ನೂತನ ರೈಲು ಮಾರ್ಗ ನಿರ್ಮಾಣ ಸಾಮಾನ್ಯ ಸಮೀಕ್ಷೆ ಕಾರ್ಯವನ್ನು ರೇಲ್ವೆ ಅಧಿಕಾರಿಗಳು ಬಹು ಬೇಗನೆ ಆರಂಭಿಸುವ ಬಗ್ಗೆ ವಿಶ್ವಾಸವಿರುವ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಪ್ರಸ್ತಾಪಿಸಿದ್ದಾರೆ.