ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಕೇಂದ್ರ ಸರಕಾರದ 2023-24ರ ಸಾಲಿನ ಆಯವ್ಯಯ ಮಂಡನೆಯ ನೇರ ಪ್ರಸಾರ ಮತ್ತು ವಿಶ್ಲೇಷಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಬಿ. ಸೋಮಣ್ಣವರ ಮಾತನಾಡಿ,
ದೇಶದ ಆಯವ್ಯಯ ದೇಶದ ಆರ್ಥಿಕ ಸ್ಥಿತಿಗತಿಯ ಪ್ರತಿಬಿಂಬವಾಗಿದೆ. ಆಯವ್ಯಯವು ಸಮತೋಲನ ಮತ್ತು ಉಳಿತಾಯವಾಗಿದ್ದಲ್ಲಿ ದೇಶವನ್ನು ಆರ್ಥಿಕವಾಗಿ ಸುಸ್ಥಿರವಾಗಿಸುತ್ತದೆ. ಅದು ಪ್ರಗತಿಯ ಮುನ್ನೋಟದ ದರ್ಶಕವಾಗಿದೆ. ಇತ್ತೀಚಿನ ಸರಕಾರಗಳು ಸಮಾನ್ಯವಾಗಿ ಕೊರತೆಯ ಬಜೆಟನ್ನೇ ಮಂಡಿಸುತ್ತಿವೆ. ಅಂದರೆ, ನಿರೀಕ್ಷಿತ ಆದಾಯಕ್ಕಿಂತಲೂ, ನಿರೀಕ್ಷಿತ ವೆಚ್ಚವು ಹೆಚ್ಚಾಗಿರುತ್ತದೆ. ಸಮಕಾಲೀನ ಸಂದರ್ಭದಲ್ಲಿ ಆರ್ಥಿಕ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣ ಮಾಡುವುದು ಮತ್ತು ಅದನ್ನು ಸಂಗ್ರಹಿಸುವ ಗುರಿಯನ್ನು ತಲುಪುವುದು ಸವಾಲಿನ ಕಾರ್ಯವಾಗಿದೆ. ಪ್ರಸ್ತುತ ಜಗತ್ತು ಯುದ್ಧ, ಸಾಂಕ್ರಾಮಿಕ ರೋಗಗಳಾದಿಯಾಗಿ ಅನೇಕ ಕ್ಷೋಭೆಗಳಿಂದ ಕೂಡಿದೆ. ಜಗತ್ತಿನ ಬಹುತೇಕ ದೇಶಗಳ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿ ಹಿಂಜರಿತವುಂಟಾಗಿದೆ. ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ ಭಾರತದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದರು.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಭಾರತ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಲಿದೆ ಎಂದು ಹೇಳಿರುವುದು ಭಾರತದ ಸುಸ್ಥಿರ ಆರ್ಥಿಕತೆಯ ದ್ಯೋತಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್ ಎಸ್ ತೇರದಾಳ ಅವರು ಪ್ರತಿ ವ್ಯಕ್ತಿಗೂ, ದೇಶಕ್ಕೂ ಆರ್ಥಿಕ ಶಿಸ್ತು ತುಂಬಾ ಅವಶ್ಯಕವಾಗಿದೆ. ಭಾರತವು ಪ್ರಪಂಚದ ಐದನೆಯ ಆರ್ಥಿಕತೆ ಹೊಂದಿದ ದೇಶವಾಗಿದೆ. ಮುಂಗಡ ಪತ್ರದಲ್ಲಿ ಬರುವ ಎಲ್ಲಾ ಅಂಶಗಳು ಸಾಕಾರವಾಗಬೇಕು. ಆಗ ಭಾರತದ ಪ್ರಗತಿಯಲ್ಲಿ ವೇಗವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ದೇಶದ ಆಯವ್ಯಯದ ಬಗೆಗೆ ಹಾಗೂ ಗಳಿಕೆ ಮತ್ತು ಉಳಿಕೆಯ ಕುರಿತು ಅರಿವಿರಬೇಕು.
ಡಾ. ಮುಕುಂದ ಮುಂಡರಗಿ, ಡಾ. ಸಚೀಂದ್ರ ಜಿ. ಆರ್., ಡಾ. ಸುಮನ್ ಮುದ್ದಾಪುರ, ರಜನಿಕಾಂತ್ ಎಸ್. ಆರ್. ಉಪಸ್ಥಿತರಿದ್ದರು. ಉಪನ್ಯಾಸಕ ರುದ್ರಪ್ಪ ಅರಳಿಮಟ್ಟಿ ನಿರೂಪಿಸಿದರು. ಡಾ. ಅರ್ಜುನ ಜಂಬರಗಿ ಸ್ವಾಗತಿಸಿದರು. ಆದಿನಾಥ ಉಪಾಧ್ಯೆ, ಡಾ. ಪ್ರಕಾಶ ಕಟ್ಟಿಮನಿ, ಡಾ. ನಾರಾಯಣ ನಾಯ್ಕ, ಚೇತನ್ ಗಂಗಾಯಿ, ಅರುಣ ವಡ್ಡಿನ, ಸುರೇಶ್ ಗಂಗೊತ್ರಿ ಮತ್ತು ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.