ದೆಹಲಿ :
ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಕಳಸಾ- ಬಂಡೂರಿ ನಾಲಾ ತಿರುವು ಯೋಜನೆ (ಮಹದಾಯಿ) ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಉದ್ದೇಶಿತ ಈ ಮಹತ್ವದ ಯೋಜನೆಗೆ ಕೇಂದ್ರ ಜಲ
ಶಕ್ತಿ ಸಚಿವಾಲಯದ ಅನುಮೋದನೆ ದೊರಕಿದೆ. ವಾರದೊಳಗೆ ಅಧಿಕೃತ ಆದೇಶ ಪ್ರತಿ ರಾಜ್ಯ ಸರಕಾರದ ಕೈ ಸೇರಲಿದೆ. ಮಹದಾಯಿ ನದಿಯಿಂದ 3.90 ಟಿಎಂಸಿ ಅಡಿ ನೀರು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಇದಾಗಿದೆ. ಈ ಕುರಿತು 1,300 ಕೋಟಿ ₹ ಮೊತ್ತದ ಪರಿಷ್ಕೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಮತ್ತು ಅಂತಾರಾಜ್ಯ ನದಿ ನೀರು ವಿವಾದ ಪ್ರಾಧಿಕಾರದ ಅನುಮೋದನೆ ಸಿಕ್ಕಿದೆ.
ಕೇಂದ್ರ ಸರ್ಕಾರದ ಆದೇಶ ರಾಜ್ಯ ಸರಕಾರಕ್ಕೆ ತಲುಪುತ್ತಿದ್ದಂತೆ ಯೋಜನೆ ಕಾಮಗಾರಿ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ಸಜ್ಜಾಗಿದೆ.
ಮಹದಾಯಿಯಿಂದ 3.90 ಟಿಎಂಸಿ ನೀರು ಬಳಸಿ ಹುಬ್ಬಳ್ಳಿ-ಧಾರವಾಡ, ಗದಗ, ಸೇರಿದಂತೆ ಉತ್ತರ ಕರ್ನಾಟಕದ ಕೆಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ.
1980 ರಲ್ಲಿ ಕಳಸಾ- ಬಂಡೂರಿ ಯೋಜನೆ ಸಿದ್ಧವಾಗಿತ್ತು. ಆದರೆ ಗೋವಾ ಸರ್ಕಾರ 2020 ರಲ್ಲಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಕಾರಣಕ್ಕೆ ಯೋಜನೆ ನೆನೆಗುದಿಗೆ ಬಿತ್ತು. ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ಬಜೆಟ್ ನಲ್ಲಿ ಸಾವಿರ ಕೋಟಿ ₹ ತೆಗೆದಿಟ್ಟಿದೆ.
ಕೃಷ್ಣಾ ನದಿ ನೀರು ಹಂಚಿಕೆ ಕೇಂದ್ರದಿಂದ ಶೀಘ್ರ ಅಧಿಸೂಚನೆ: ಸಿಎಂ ವಿಶ್ವಾಸ
ಕೃಷ್ಣಾ ನದಿ ನೀರು ಹಂಚಿಕೆ ತೀರ್ಪು ಸಂಬಂಧ ಕೇಂದ್ರ ಸರ್ಕಾರ ಶೀಘ್ರ ಅಧಿಸೂಚನೆ ಹೊರಡಿಸಲಿದೆ, ತೀರ್ಪು ಆಕ್ಷೇಪಣೆ ವಿಚಾರಣೆಗೆ ಸುಪ್ರೀಂಕೋರ್ಟ್ ನಲ್ಲಿ ಶೀಘ್ರ ವಿಶೇಷ
ಬೆಂಚ್ ಸ್ಥಾಪನೆಯಾಗಲಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ನ್ಯಾಯಾಧೀಶರು ಹಿಂದೆ ಸರಿದಿದ್ದು ಹೊಸ ನ್ಯಾಯಾಧೀಶರ ನೇಮಕಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ತಿಂಗಳು ವಿಚಾರಣೆ ಆರಂಭವಾಗಲಿದೆ. ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿ ಆಲಮಟ್ಟಿಗೆ ಸ್ಥಳಾಂತರ ಜನವರಿ ಒಳಗೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಲಕೋಟೆಯಲ್ಲಿ ತಿಳಿಸಿದ್ದಾರೆ.