ನವದೆಹಲಿ: ನೀಟ್ (NEET) ಹಗರಣದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು ಜಾರಿಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಹಗರಣಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ-2024 ಕಾನೂನು ಜಾರಿಗೆ ಅಧಿಸೂಚನೆ ಹೊರಡಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಗಟ್ಟುವ ಕಾನೂನು ಜೂನ್ 21 ರಿಂದಲೇ ಜಾರಿಗೆ ತರಲಾಗಿದೆ. ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ-2024 ಅನ್ನು ಈ ಮಸೂದೆಯನ್ನು ಕಳೆದ ಫೆಬ್ರವರಿಯಲ್ಲಿ ಸಂಸತ್ ಅಂಗೀಕರಿಸಿತ್ತು. ಇದು ವಂಚನೆಯನ್ನು ತಡೆಯುವ ಮತ್ತು ಸಾರ್ವಜನಿಕ ಪರೀಕ್ಷೆಗಳ ಸಮಗ್ರತೆಯನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿದೆ.
ಫೆಬ್ರವರಿ 9, 2024 ರಂದು ಸಂಸತ್ ಅಂಗೀಕರಿಸಿದ ಕಾನೂನಿನ ಪ್ರಕಾರ, ಪರೀಕ್ಷಾ ಅಕ್ರಮಗಳಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಸಂಘಟಿತವಾಗಿ ನಿರಂತರವಾಗಿ ಅಪರಾಧಗಳಲ್ಲಿ ತೊಡಗಿರುವವರಿಗೆ ಐದರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸಲಿದೆ. ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು, ಪರೀಕ್ಷಾ ಪ್ರಾಧಿಕಾರ, ಸೇವಾ ಪೂರೈಕೆದಾರರು ಅಥವಾ ಯಾವುದೇ ಇತರ ಸಂಸ್ಥೆ ಸೇರಿದಂತೆ ಪರೀಕ್ಷಾ ಅಕ್ರಮ ಅಪರಾಧವನ್ನು ಮಾಡಿದರೆ ಅವರಿಗೆ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. 1 ಕೋಟಿಗಿಂತ ಕಡಿಮೆಯಿಲ್ಲದ ದಂಡ ವಿಧಿಸಲಾಗುತ್ತದೆ ಎಂದು ಕಾನೂನು ಹೇಳುತ್ತದೆ.
ಈ ಕಾಯಿದೆಯು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC), ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೇಸ್, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುವ ಎಲ್ಲಾ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಿಗೂ ಅನ್ವಯವಾಗಲಿದೆ.