ಇಡೀ ವಿಶ್ವಕ್ಕೇ ಶಾಂತಿ ಸಂದೇಶ ಸಾರಿದ ನಮ್ಮ ನೆಚ್ಚಿನ ಮೋಹನ್ ದಾಸ್ ಕರಮ ಚಂದ್ ಗಾಂಧಿ ಅವರ ಸಮಾನತೆ ಏಕತೆಯ ಸಂದೇಶ, ಧೀನ ದಲಿತರ ಪರವಾದ ನಿಲುವು, ಜಾತಿ- ಮತ ಧರ್ಮಗಳ ಪ್ರತೀಕ ಅವರಿಗಿದ್ದ ಸಮಭಾವ ಹೀಗೆ ಎಲ್ಲವೂ ಹಿಂದಿಗೂ- ಇಂದಿಗೂ- ಮುಂದೆಯೂ ನಿತ್ಯ ನಿರಂತರವಾದವು. ಹೀಗಾಗಿಯೇ ಮಹಾತ್ಮ ಗಾಂಧಿಜಿ ಅವರೇ ಹೇಳಿರುವಂತೆ “ಅವರ ಜೀವನವೇ ಒಂದು ಸಂದೇಶ”.
ಸ್ಥಿತಿವಂತ ಮನೆತನದಿಂದ ಬಂದು ಉತ್ತಮ ವಿಧ್ಯೆ ಪಡೆದಿದ್ದ ಗಾಂಧೀಜಿ ಅವರು ವಕೀಲಿವೃತ್ತಿ ವೇಳೆ ದಕ್ಷಿಣ ಆಫ್ರಿಕಾದಲ್ಲಿನ ಸಮಾನತೆ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಪರಿ ನಂತರ ಭಾರತದಲ್ಲಿನ ಸ್ವಾತಂತ್ರ್ಯ ಹೋರಾಟದ ಸಂದರ್ಭದ ಅವರ ನಿಲುವುಗಳು ಇಂದಿನ ಜಾಗತಿಕ ಜನಾಂಗೀಯ ವೈಷಮ್ಯ, ಯುದ್ಧಾತಂಕಗಳನ್ನು ನಿವಾರಿಸುವ ಸುಲಭ ಮಂತ್ರಗಳಾಗಿವೆ.
ಹೀಗೆ ತಮ್ಮ ಜೀವನವನ್ನೇ ದೇಶಕ್ಕಾಗಿ, ಮನುಕುಲದ ಉದ್ಧಾರಕ್ಕಾಗಿ ಪಣವಾಗಿಟ್ಟ ಮಹಾತ್ಮ ಗಾಂಧೀಜಿ ಇಂದು ನಮ್ಮೊಂದಿಗೆ ಇಲ್ಲದಿರಬಹುದು ಆದರೆ, ಅವರು ಹಾಕಿಕೊಟ್ಟ ಸಮಬಾಳಿನ ಮಾರ್ಗ, ಸಮಾನತೆಯ ಹಾದಿ ಇಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಸ್ವಾತಂತ್ರ್ಯ ಪೂರ್ವದಲ್ಲಿ ʼಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶʼದ ಶತಮಾನೋತ್ಸವ ಆಚರಿಸುವ ಮೂಲಕ ಗಾಂಧೀಜಿ ಅವರನ್ನು ಇಂದಿನ ಜನತೆಗೆ ಪುನರ್ ಪರಿಚಯಿಸುವ ಪ್ರಯತ್ನ ನಡೆಸುತ್ತಿದೆ.
೧೯೨೪ರ ಡಿಸೆಂಬರ್ ೨೬ ರಂದು ಪೂಜ್ಯ ಮಹಾತ್ಮಗಾಂಧೀಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದಾಗ ವಿಜಯನಗರ ಸಾಮ್ರಾಜ್ಯದ ಗತವೈಭವದ ಪರಿಕಲ್ಪನೆಯನ್ನು ಸ್ಮರಿಸಿದ್ದು ಕರ್ನಾಟಕದ ಮಟ್ಟಿಗೆ ಅತಿದೊಡ್ಡ ವಿಚಾರ. ಇದು ದೇಶವ್ಯಾಪಿ ಸಂಘಟನೆಗೆ ಕಾರಣವಾಯಿತು. ಬೆಳಗಾವಿಯ ಟಿಳಕವಾಡಿಯ ೮೪ ಎಕರೆ ಪ್ರದೇಶದಲ್ಲಿ ಲಕ್ಷಾಂತರ ಜನರು ಕೂಡುವ ಆಸನದ ವ್ಯವಸ್ಥೆ ಮಾಡಿರುವ ವೇದಿಕೆಯ ಸ್ಥಳದಲ್ಲಿ ಅಂದು ಮಹಾತ್ಮಗಾಂಧೀಜಿ ಅವರು ಅಂದಿನ ಬೆಳಗಾವಿ ಅಧಿವೇಶನದ ಸ್ಥಳಕ್ಕೆ `ವಿಜಯನಗರ’ ಎಂದು ಹೆಸರಿಸಿದ್ದರು. ಆ ಅಧಿವೇಶನಕ್ಕೆ ಒಂದು ವಾರ ಮೊದಲೇ ಆಗಮಿಸಿದ್ದ ಮಹಾತ್ಮಗಾಂಧೀಜಿಯವರು `ಶ್ರೀ ವಿದ್ಯಾರಣ್ಯ ಆಶ್ರಮ’ ಹೆಸರಿನ ಕುಟೀರದಲ್ಲಿ ಉಳಿದುಕೊಂಡಿದ್ದರು. ಅಂದು ಸಮಾವೇಶಕ್ಕೆ ಬರುವವರಿಗಾಗಿಯೇ ನೀರಿನ ದಾಹ ಇಂಗಿಸಲು ಬಾವಿಯನ್ನು ತೋಡಲಾಗಿದ್ದು ಆ ಬಾವಿಗೆ `ಪಂಪಾ ಸರೋವರ’ ಎಂದು ಹೆಸರಿಸಲಾಗಿತ್ತು. ಇದರ ಉದ್ದೇಶ ಸ್ಪಷ್ಟ. ಅಂದಿನ ಕಾಂಗ್ರೆಸ್ ಬೆಳಗಾವಿ ಅಧಿವೇಶನ ನಂತರ ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸಲಿ, ಜನರಲ್ಲಿ ಐಕ್ಯತೆ, ಭ್ರಾತೃತ್ವ ಮನೋಭಾವನೆ ಮೊಳೆತು ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳು ವಿಜೃಂಭಿಸಲಿ. ಆ ಮೂಲಕ ಕರ್ನಾಟಕ ಮಹತ್ತಾದುದನ್ನು ಸಾಧಿಸಲಿ. ಎಲ್ಲರಲ್ಲೂ ಪರಸ್ಪರ ಸಹೋದರತ್ವ ಗುಣಗಳು ಮೇಳೈಸಲಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಧನೆಯ ಮಾರ್ಗ ಅನುಸರಿಸಲಿ ಎನ್ನುವುದಾಗಿತ್ತು. ಬೆಳಗಾವಿ ಅಧಿವೇಶನ ಮುಗಿದ ಎರಡು ದಶಕದಲ್ಲಿ ಎಲ್ಲರ ನಿರೀಕ್ಷೆಯಂತೆ ಸ್ವಾತಂತ್ರ್ಯ ಲಭಿಸಿತು. ಮಹಾತ್ಮಗಾಂಧೀಜಿ ಅವರ ಅಹಿಂಸಾ ಮಾರ್ಗ ದೇಶದ ಪ್ರಜೆಗಳಿಗೆ ಸ್ಪೂರ್ತಿಯ ಸೆಲೆಯಾಗಿತ್ತು.
ವಿಶ್ವಾಸಕ್ಕೆ ಇನ್ನೊಂದು ಹೆಸರೇ ಗಾಂಧೀಜಿ:
ಮಹಾತ್ಮಗಾಂಧೀಜಿ ದೈವೀಕ ಮನಃಸ್ಥಿತಿಯ ಸಮಾಜದ ಪರಿವರ್ತನೆಯ ಹರಿಕಾರರಾಗಿದ್ದರು. ಆಗ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸಮಾವೇಶಗಳು ಜರುಗಿದ್ದವು. ಬಾಲಗಂಗಾಧರನಾಥ ತಿಲಕ್ ಆದಿಯಾಗಿ ಕೆಲ ಪ್ರಮುಖರು ಅಂದಿನ ಸಮಾವೇಶಗಳ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದ ಮೂಲಕ ಸ್ವಾತಂತ್ರ್ಯ ಸಮರ ಗೀತೆಯನ್ನು ಹಾಡಿದ್ದರು. ಕರ್ನಾಟಕದ ಕುಂದಾನಗರಿ ಬೆಳಗಾವಿಯಲ್ಲಿ ೧೯೨೪ರ ಡಿಸೆಂಬರ್ ೨೪ ರಂದು ಮಹಾತ್ಮಗಾಂಧೀಜಿ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು ವಿಶೇಷ. ಅಂದು ಗಾಂಧೀಜಿ ಅವರು ಜನರಲ್ಲಿ ಸ್ವಾತಂತ್ರ್ಯ ಮತ್ತು ಸ್ವರಾಜ್ ನಿರ್ಮಾಣದ ಕಿಚ್ಚು ಹಚ್ಚಿದ್ದರು. ವಿವಿಧ ಪ್ರಾಂತ್ಯಗಳ ವಿಘಟನೆಗೆ ಕಾರಣ ಹೇಳಿ ಸಂಘಟನೆಗೆ ಸಲಹೆಗಳನ್ನು ನೀಡಿದ್ದರು. ಸಾಮಾಜಿಕ ಸಮಸ್ಯೆಗಳು ಉಲ್ಬಣಗೊಂಡಿದ್ದ ಆ ಸಂದರ್ಭದಲ್ಲಿ ಜನರು ಎಂಥಹ ಸನ್ನಿವೇಶಗಳಿಗೂ ಜಗ್ಗದೇ, ಬಗ್ಗದೇ, ಭಯ ಭೀತರಾಗದೇ ಪರಿಸ್ಥಿತಿಯನ್ನು ನಿಭಾಯಿಸುವ ಸೂತ್ರಗಳನ್ನು ರಚಿಸಿದ್ದ ಗಾಂಧೀಜಿ ಪ್ರೇರಕ ಶಕ್ತಿಯಾಗಿದ್ದರು. ಅವರ ಮಾತಿನಲ್ಲಿ ಮೊನಚು ಇದ್ದರೂ ಅಹಿಂಸೆಯ ಮಾರ್ಗದಿಂದ ಏನು ಬೇಕಾದರೂ ಸಾಧಿಸಬಹುದೆನ್ನುವುದನ್ನು ವಿವರಿಸಿದ್ದರು. ಕಾಂಗ್ರೆಸ್ ಪಕ್ಷವನ್ನು ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ, ಎಲ್ಲ ಜನ ಸಮುದಾಯಗಳನ್ನು ಒಗ್ಗೂಡಿಸಿ `ಒಂದೇ ಒಂದೇ ನಾವೆಲ್ಲ ಒಂದೇ’ ಎಂದು ಸಾರಿದ್ದರು. ಕಾಂಗ್ರೆಸ್ ಪಕ್ಷದ ಹೋರಾಟ ಕೇವಲ ಭಾರತ ಸ್ವಾತಂತ್ರ್ಯಕ್ಕಾಗಿ ಅಲ್ಲ, ಅದೊಂದು ಮೇಲು-ಕೀಳು ಎಂದು ಬೀಗುವ, ಬಾಗುವ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಮಂತ್ರವಾಗಿತ್ತು. ಅಂದಿನಿಂದಲೇ ಸಮಾಜದಲ್ಲಿ ಪರಿವರ್ತನೆಯಾಗಲು ಸಾಧ್ಯವಾಯಿತು. ಕಾಂಗ್ರೆಸ್ ಪಕ್ಷ ಅಂದು, ಇಂದು ಮತ್ತು ಮುಂದೆಯೂ ಕೂಡ ಎಲ್ಲ ವರ್ಗದ, ಎಲ್ಲ ಜನ ಸಮುದಾಯದ ಅತ್ಯಂತ ವಿಶ್ವಾಸಾರ್ಹ, ವಿನೀತವಾದ ಪಕ್ಷ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಕಾರಣಕ್ಕಾಗಿ ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಅಧಿವೇಶನದ ಶತಮಾನೋತ್ಸವವನ್ನು ಅತ್ಯಂತ ವಿಜೃಂಭಣೆ, ಅರ್ಥಪೂರ್ಣವಾಗಿ ಮತ್ತು ವರ್ಷಪೂರ್ತಿ ಅವ್ಯಾಹತವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದೇಶದಲ್ಲಿ ಕರ್ನಾಟಕ ಮಾದರಿಯಾಗಲಿದೆ:
ಕಾಂಗ್ರೆಸ್ ಸಾಧನೆಗಳನ್ನು ಬಿಂಬಿಸಲು ಹಲವು ಹನ್ನೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಪಕ್ಷವು ರಾಜ್ಯದಾದ್ಯಂತ ಬೆಳಗಾವಿ ಸಮ್ಮೇಳನದ ಮಾದರಿಯನ್ನು ಶಾಶ್ವತವಾಗಿ ಜನರ ಸ್ಮೃತಿ ಪಟಲದಲ್ಲಿರಿಸಲು ಯೋಜನೆ ರೂಪಿಸಿದೆ. ಅಂದಿನ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯು ಬೆಳಗಾವಿಯ ಅಧಿವೇಶನವನ್ನು ಹಮ್ಮಿಕೊಂಡಿದ್ದ ಮಾದರಿಯಲ್ಲಿಯೇ ಕಾರ್ಯಕ್ರಮಗಳು ನಡೆಯಲಿವೆ. ನಮ್ಮ ರಾಜ್ಯದಲ್ಲಿ ನಡೆದ ಏಕೈಕ ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ಅಧಿವೇಶನವನ್ನು ಕರ್ನಾಟಕ ಕೇಸರಿ ಎಂದೇ ಖ್ಯಾತರಾಗಿದ್ದ ಗಂಗಾಧರ್ ರಾವ್ ದೇಶಪಾಂಡೆ ಮತ್ತು ತಂಡದವರು ಆಯೋಜಿಸಿದ್ದರು. ಮಹಾತ್ಮಗಾಂಧೀಜಿ ಅವರು ಈ ಅಧಿವೇಶನದ ಯಶಸ್ಸನ್ನು ಮನಃಪೂರ್ವಕವಾಗಿ ಅಭಿನಂದಿಸಿ ಇದು `ವಿಜಯನಗರದ ಒಂದು ವಿಜಯ’ ವಾಗಿದೆ ಎಂದು ಬಣ್ಣಿಸಿದ್ದರು. ಡಾ.ನಾ.ಸು.ಹರ್ಡೀಕರ್ ನೇತೃತ್ವದ ಸೇವಾದಳ ಸ್ವಚ್ಛತೆ, ಶಿಸ್ತು ಪಾಲನೆಗೆ ಆ ಸಮಾವೇಶ ಹೆಸರಾಗಿತ್ತು. ಗಾಂಧೀಜಿ ಅವರ ಆಶಯದಂತೆಯೇ ಊಟ, ಉಪಹಾರ ಒಳಗೊಂಡಂತೆ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದವು. ಅಂದಿನ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಗಂಗಾಧರ್ ದೇಶಪಾಂಡೆ ಅವರ ಕಾಳಜಿಯನ್ನು ಗಾಂಧೀಜಿ ಕೊಂಡಾಡಿದ್ದರು. ೧೭ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಆ ಸಮ್ಮೇಳನವನ್ನು ಮೀರಿಸುವಂತೆ ಇಂದು ಲಕ್ಷಾಂತರ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನೂರು ವರ್ಷಗಳ ಸಾರ್ಥಕ ದಿನಗಳನ್ನು ಪಕ್ಷದ ಅಗ್ರ ನಾಯಕರು, ಧುರೀಣರು, ಮುಖಂಡರು ಸ್ಮರಿಸಲಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯವನ್ನು ಒಂದು ಮಾದರಿ ಹಾಗೂ ವಿಶಿಷ್ಟ ರಾಜ್ಯವನ್ನಾಗಿಸಲು ಅಣಿಯಾಗಿದ್ದಾರೆ. ಅಂದಿನ ಸಮಾವೇಶದಲ್ಲಿ ೧೬ ನಿರ್ಣಯಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಪಂಚ ಗ್ಯಾರಂಟಿಗಳಿಂದ ಇಂದು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಜನಪರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ ಇಂದಿನ ಸಮಾವೇಶದಲ್ಲಿಯೂ ಜನಪರ, ರಾಜ್ಯದ ಅಭಿವೃದ್ಧಿಪರವಾದ ಪ್ರಮುಖ ನಿರ್ಣಯಗಳನ್ನು ಘೋಷಿಸಲಿದೆ.
ಬಾಲಕಿ ಗಂಗೂಬಾಯಿ ಹಾನಗಲ್:
ಅಂದು ನಡೆದ ಸಮ್ಮೇಳನದಲ್ಲಿ ಗಂಗೂಬಾಯಿ ಹಾನಗಲ್ ಕೇವಲ ೧೩ ವರ್ಷದ ಬಾಲಕಿ. ಹುಯಿಲಗೋಳ ನಾರಾಯಣರಾವ್ ಅವರ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡಿದ್ದರು. ಆ ತಾರಕ ಮಂತ್ರದಿಂದ ಅಂದಿನ ಅಧಿವೇಶನ ಸಂಘಟನೆ, ಸಮರ್ಥ ಆಯೋಜನೆ, ಶಿಸ್ತು ಬದ್ಧ ಕಾರ್ಯಕಲಾಪ, ಪ್ರಜಾತಾಂತ್ರಿಕ ಮೌಲ್ಯಗಳಿಗೆ ಮನ್ನಣೆ ನೀಡಿತ್ತು. ಬಳಿಕ ಕರ್ನಾಟಕ ಏಕೀಕರಣ, ಅಸ್ಪೃಶ್ಯತಾ ನಿವಾರಣಾ ಸಮಾವೇಶ, ಹಿಂದೂ ಮಹಾಸಭಾ, ಖಿಲಾಪತ್ ಸಮ್ಮೇಳನ ಸೇರಿದಂತೆ ಹಲವು ಸಮಾವೇಶಗಳು ನಡೆದವು. ಮೈಸೂರು ಸಂಸ್ಥಾನದ ಸಹಯೋಗದಲ್ಲಿ ವಸ್ತು ಪ್ರದರ್ಶನ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಿದ್ದು ಅಂದು ವೀಣೆ ಶೇಷಣ್ಣ ಗಾಂಧೀಜಿ ಗಮನ ಸೆಳೆದಿದ್ದರು. ಇಂದು ನಡೆಯುತ್ತಿರುವ ಅಧಿವೇಶನದಿಂದ ಇತಿಹಾಸ ಮೆಲುಕು ಹಾಕಿ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯಕವಾಗುತ್ತದೆ. ಮಹಾತ್ಮಗಾಂಧೀಜಿ ಅವರ ಆಶಯದಂತೆ, ಅವರ ಕನಸಿನಂತೆ ಭವ್ಯವಾದ ನಾಡನ್ನು ಕಟ್ಟಲು ನೆರವಾಗಲಿದೆ. ಈ ಕಾರಣಕ್ಕಾಗಿ ವರ್ಷಪೂರ್ತಿ ಶತಮಾನೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. `ಶತಮಾನೋತ್ಸವ ಸಮಿತಿ ಹೆಸರಿನ ಉನ್ನತ ಮಟ್ಟದ ಸಮಿತಿ’ ರಚಿಸಲಾಗಿದ್ದು `ಗಾಂಧೀ ಭಾರತ’ ಹೆಸರಿನಡಿ ೪೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಐಕ್ಯತಾ ಸಮಾವೇಶವಾಗಿತ್ತು:
ದೇಶದ ಸ್ವಾತಂತ್ರ್ಯಕ್ಕಾಗಿ ಸುದೀರ್ಘ ಇನ್ನೂರು ವರ್ಷಗಳಿಗೂ ಅಧಿಕ ದಿನಗಳ ಕಾಲ ಹೋರಾಟ ಮಾಡಲಾಗಿತ್ತು. ಅದು ೧೯೨೪ರ ಅವಧಿಗೆ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ರಾಜಕೀಯ ಸಂಘಟನೆಯಾಗಿ ಮಾರ್ಪಟ್ಟಿತ್ತು. ಆ ಅಧಿವೇಶನದಿಂದ ಸಮಾಜ ಸುಧಾರಣೆ, ಜವಾಬ್ದಾರಿ ಅರಿತು ಸೈದ್ಧಾಂತಿಕವಾಗಿ ಸ್ಪಷ್ಟತೆ ಪಡೆದುಕೊಂಡಿದೆ ಎಂದು ಹೇಳಿದ ಗಾಂಧೀಜಿ ಅವರು, ಅಸ್ಪೃಶ್ಯತೆ ಸ್ವರಾಜ್ಯಕ್ಕೆ ಅತಂಕವಾಗಿದೆ ಎಂದಿದ್ದರು. ಹಿಂದೂ-ಮುಸ್ಲಿಂ ಏಕತೆ ಸಾಧಿಸಲು ಹೇಳಿದ್ದರು. ದಮನಕ್ಕೆ ಒಳಗಾದ ವರ್ಗಗಳ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ನಾಂದಿ ಹಾಡಿದ್ದರು. ಆಗ ಅಸ್ಪೃಶ್ಯತೆ ನಿವಾರಣೆಗೆ ನಿರ್ಣಯ ಕೈಗೊಳ್ಳಲಾಗಿತ್ತು. ಗಾಂಧೀಜಿ ಅವರ ಭಾಷಣದಿಂದ ರಾಷ್ಟ್ರೀಯ ಕಾಂಗ್ರೆಸ್ ಅಖಂಡ ಭಾರತದ ಜನತೆಯ ಏಕೈಕ ಪ್ರತಿನಿಧಿ ಸಂಸ್ಥೆಯಾಗಿ ಪರಿವರ್ತನೆ ಆಗಿತ್ತು. ಆಗ ಮೇಲ್ವರ್ಗದ ಜನರು, ಖಾದಿಗೆ ಶರಣಾಗಿ ಸರಳ ಜೀವನ ಅಳವಡಿಸಿಕೊಂಡಿದ್ದರು. ಆಗ ಕಾಂಗ್ರೆಸ್ ನಿಂದ ದೂರವಾಗಿದ್ದವರೆಲ್ಲ ಮರಳಿ ಪಕ್ಷಕ್ಕೆ ಬಂದರು. ಬೆಳಗಾವಿ ಅಧಿವೇಶನ ಐಕ್ಯತೆ ಸಾರುವ ಸಮಾವೇಶವಾಗಿದ್ದು, ಇಂದಿನ ಸಮಾವೇಶವೂ ಕೂಡ ರಾಜ್ಯದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲಿದೆ. ಇದರಿಂದ ಗಾಂಧೀಜಿ ಅವರನ್ನು ಅವರ ತತ್ವಾದರ್ಶಗಳ ಮೂಲಕ ನಮ್ಮೊಂದಿಗೆ ಇರಿಸಿಕೊಳ್ಳುವ ಪ್ರಯತ್ನವೂ ಆಗಲಿದೆ.
✒️ಹೆಚ್.ಕೆ.ಪಾಟೀಲ್
ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರು,
ಕರ್ನಾಟಕ ಸರ್ಕಾರ, ಬೆಂಗಳೂರು.