ಜನ ಜೀವಾಳ ಜಾಲ ಬೆಳಗಾವಿ : ಕನ್ನಡವನ್ನು ಜಾಗತಿಕ ಭಾಷೆಯನ್ನಾಗಿ ಬೆಳೆಸುವುದು ನಮ್ಮ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕೆಎಲ್ಇ ಸಂಸ್ಥೆಯ ಜಿಎ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ರವೀಂದ್ರ ಪಾಟೀಲ ಕರೆ ನೀಡಿದರು.
ನಗರದ ಕೆಎಲ್ಇ ಯಲ್ಲಿ ಸಂಸ್ಥೆಯ ಜಿಎ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡ ಭಾಷೆ ಸಂಪೂರ್ಣವಾಗಿ ಜಾರಿಯಾಗಬೇಕು. ಕನ್ನಡ ಭಾಷೆ ಪ್ರತಿಯೊಬ್ಬರ ಉದ್ಯೋಗದ ಹಕ್ಕಾಗಿ ರೂಪುಗೊಳ್ಳಬೇಕು. ನಾವೆಲ್ಲರೂ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕು. ನಾವು ನಮ್ಮ ಭಾಷೆಯನ್ನು ಬೆಳೆಸದೇ ಇದ್ದರೆ ಈ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ. ಕನ್ನಡ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದೆ. ಆದರೆ, ಕರ್ನಾಟಕದಲ್ಲಿ ಕನ್ನಡವೇ ಮೇಲುಗೈ ಸಾಧಿಸುವಂತೆ ಆಗಬೇಕು ಈ ನಿಟ್ಟಿನಲ್ಲಿ ಪೂರಕ ಕೆಲಸಗಳಾಗಬೇಕು ಎಂದು ಹೇಳಿದರು.
ಜಗತ್ತಿನ ಭಾಷೆಗಳ ತಾಯಿ ಎನಿಸಿಕೊಂಡ ಸಂಸ್ಕೃತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾಗಿದೆ. ಇಂದಿನ ಸಂದರ್ಭದಲ್ಲಿ ಜಗತ್ತಿನಲ್ಲಿ ಹಲವಾರು ಭಾಷೆಗಳು ವಿನಾಶದ ಅಂಚಿಗೆ ತಲುಪಿವೆ, ಈ ನಿಟ್ಟಿನಲ್ಲಿ ಕನ್ನಡದ ಬೆಳವಣಿಗೆಗೆ ನಾವೆಲ್ಲರೂ ಪರಿಶ್ರಮ ಪಡಬೇಕು. ಇಂಗ್ಲೀಷ್ ಜಾಗತಿಕ ಭಾಷೆ ನಿಜ. ಆದರೆ ನಮ್ಮ ಮಾತೃಭಾಷೆಯಾಗಿರುವ ಕನ್ನಡದ ಬೆಳವಣಿಗೆಗೆ ನಾವು ಪಣತೊಡಬೇಕು. ಈ ದಿಸೆಯಲ್ಲಿ ನಾವೆಲ್ಲರೂ ಸದಾ ಕನ್ನಡ ಭಾಷೆ ಹಾಗೂ ಅದರ ಅಸ್ತಿತ್ವ ಕಾಪಾಡಲು ಕಂಕಣಬದ್ಧರಾಗಬೇಕು ಎಂದು ತಿಳಿಸಿದರು.
ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ಎಂ.ಎಸ್. ಬಳಿಗಾರ, ಉಪ ಪ್ರಾಚಾರ್ಯ ಎಸ್ .ಆರ್. ಗದಗ, ಸಹಾಯಕ ಶಿಕ್ಷಕ ಆರ್.ಎಂ.ಮಗದುಮ್ ಉಪಸ್ಥಿತರಿದ್ದರು. ಉಪನ್ಯಾಸಕಿ ಎಸ್.ಎಸ್.ಗಂಗಾಪುರ ನಿರೂಪಿಸಿದರು. ಗಾಯತ್ರಿ ತಾರಿಹಾಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ವಿ.ಬಿ. ಪಾಟೀಲ ಸ್ವಾಗತಿಸಿದರು. ದೀಪ ನಾವಿ ಮಾತನಾಡಿದರು. ರೋಹಿಣಿ ಕೆಂಚರಾಹುತ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಉಪನ್ಯಾಸಕ ಬಿರಾದಾರ ವಂದಿಸಿದರು.