ದಾಂಡೇಲಿ : ವೈದ್ಯರೊಬ್ಬರಿಗೆ ಬ್ಲ್ಯಾಕ್ಮೇಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಂಡೇಲಿ ಪೊಲೀಸರು ಹುಬ್ಬಳ್ಳಿ ಮೂಲದ ಮೂವರು ನಕಲಿ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಮೂಲದ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ ಮತ್ತು ಸತೀಶ್ ಭಾಗವಾನ್ ಕೇದಾರಿ ಬಂಧಿತರು. ಇವರು ದಾಂಡೇಲಿ ನಗರದ ಲೆನಿನ್ ರಸ್ತೆಯಲ್ಲಿ ವೈದ್ಯ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವ ವ್ಯಕ್ತಿಯೊಬ್ಬರಿಗೆ ಬೆದರಿಕೆಯೊಡ್ಡಿ ಎರಡೂವರೆ ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಮೂವರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಶೋಕ ಶಂಭು ಪರಬ್ ಎಂಬುವವರು ಕಳೆದ ಹಲವು ವರ್ಷಗಳಿಂದ ಪ್ರಕೃತಿ ಚಿಕಿತ್ಸಕರಾಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಇವರ ಬಳಿ ಬಂದ ಆರೋಪಿತರು ತಾವು ಹುಬ್ಬಳ್ಳಿಯ ವಿಜಯ9 ನ್ಯೂಸ್ ನವರೆಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದರು. ನೀನು ನಕಲಿ ವೈದ್ಯನಿದ್ದೀ. ನಿನ್ನ ಬಗ್ಗೆ ನ್ಯೂಸ್ ಮಾಡಿ ನಮ್ಮ ಚಾನೆಲ್ ನಲ್ಲಿ ಹಾಕುತ್ತೇವೆ ಅಂತ ಹೇಳಿ ಹೆದರಿಸಿ ವಿಜಯ 9 ನ್ಯೂಸ್ ಎಂದು ಯೂಟ್ಯೂಬ್ ಚಾನೆಲ್ ನಲ್ಲಿ ವರದಿ ಪ್ರಸಾರ ಮಾಡಿದ್ದಾರೆ.
ಆನಂತರ ಅಶೋಕ ಶಂಭು ಪರಬ್ ಅವರಿಗೆ ಕರೆ ಮಾಡಿ ಈಗಾಗಲೇ ಸಣ್ಣ ಚಾನೆಲ್ ನಲ್ಲಿ ಸುದ್ದಿ ಪ್ರಸಾರ ಮಾಡಿದ್ದೇವೆ. ನೀನು ನಮಗೆ 2.5 ಲಕ್ಷ ರೂ. ಕೊಡದಿದ್ದರೆ ದೊಡ್ಡ ದೊಡ್ಡ ಚಾನೆಲ್ಗಳಲ್ಲಿ ಸುದ್ದಿಯನ್ನು ಪ್ರಸಾರ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಗೃಹ ಸಚಿವರಿಗೆ ವಿಡಿಯೋ ಕಳುಹಿಸಿ ನಿನ್ನ ಜೀವನವನ್ನು ಹಾಳು ಮಾಡುತ್ತೇವೆ ಅಂತ ಪದೇ ಪದೇ ಕರೆ ಮಾಡಿ ಹಣ ಕೊಡುವಂತೆ ಹೆದರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಅದೇ ರೀತಿ ಭಾನುವಾರ ಮಧ್ಯಾಹ್ನ ಮತ್ತೆ ಹಣ ಕೊಡುವಂತೆ ಹೆದರಿಸಿ ಬೆದರಿಸಿದ್ದಾರೆಂದು ಅಶೋಕ ಶಂಭು ಪರಬ್ ನಗರ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದರು. ದೂರು ಸ್ವೀಕರಿಸಿ ತನಿಖೆಗಿಳಿದ ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಕಿರಣ ಬಿ. ಪಾಟೀಲ ತಕ್ಷಣವೇ ಈ ಮೂವರು ನಕಲಿ ಪತ್ರಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.