ಬೆಂಗಳೂರು :ಕಾಂಗ್ರೆಸ್ ಪಕ್ಷದ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಇತರ ನಾಯಕರ ಕಾಂಗ್ರೆಸ್ ಸೇರ್ಪಡೆ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಈ ದಿನವನ್ನು ಬಹಳ ಸೂಕ್ಷ್ಮವಾಗಿ ನೋಡಲಾಗುತ್ತಿದೆ. ಇಡೀ ರಾಜ್ಯದಲ್ಲಿ 63 ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ವಲಸೆ ಹೋಗುತ್ತಿದ್ದಾರೆ. 90% ರಷ್ಟು ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಕೆಲವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು, ಮತ್ತೇ ಕೆಲವರು ಜೆಡಿಎಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ಇನ್ನು 5 ವರ್ಷಗಳ ಕಾಲ ವಿಧಾನ ಪರಿಷತ್ ಅಧಿಕಾರವಿದ್ದರೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅವರು ಈ ಹಿಂದೆ ಸಹಕಾರ, ಸಾರಿಗೆ ಸಚಿವರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಅವರು ಚುನಾವಣೆಯಲ್ಲಿ ಸೋತಾಗಲೂ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿತ್ತು. ಆಪರೇಷನ್ ಕಮಲ ಮಾಡಿದಾಗ ಮುಂದೆ ತಮಗೆ ಟಿಕೆಟ್ ನೀಡುವುದಾಗಿ ಬಿಜೆಪಿ ನಾಯಕರು ಇವರಿಗೆ ಮಾತು ಕೊಟ್ಟಿದ್ದರು. ಆದರೆ ನುಡಿದಂತೆ ನಡೆಯಲಿಲ್ಲ. ಹೀಗಾಗಿ ಬೇಸತ್ತು ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ.
ಅವರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಮ್ಮ ಜತೆ ಚರ್ಚೆ ಮಾಡಿ, ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರುತ್ತಿದ್ದಾರೆ. ರಾಜ್ಯದ ಎಲ್ಲ ನಾಯಕರು ಕಾರ್ಯಕರ್ತರ ಪರವಾಗಿ ಸವದಿ ಅವರನ್ನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿ, ಶಾಸಕಾಂಗ ಪಕ್ಷದ ನಾಯಕರ ಜತೆ ಸಭೆ ಮಾಡಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಬೆಳಗಾವಿಯಲ್ಲಿ ಕಾರ್ಯಕ್ರಮ ಇರುವುದರಿಂದ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಅಂಬೇಡ್ಕರ್ ಅವರು ಜನಿಸಿದ ದಿನ ಈ ಶುಭ ದಿನ, ಶುಭ ಗಳಿಗೆಯಲ್ಲಿ ನಾವು ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಇವರ ಜತೆಗೆ ಮಾಜಿ ಸಚಿವ ಶಶಿಕಾಂತ ನಾಯ್ಕ್, ಸಂಘಟನೆಕಾರರಾದ ಶಂಕರ್ ಗೌಡರು ಪಕ್ಷ ಸೇರುತ್ತಿದ್ದಾರೆ.
*ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:*
ಭಾರತದ ರಾಜಕೀಯದಲ್ಲಿ ಅನೇಕ ವಿಚಾರವಾಗಿ ಇಂದಿನ ದಿನ ಐತಿಹಾಸಿಕ ದಿನವಾಗಿದೆ. ಉತ್ತಮ ಕರ್ನಾಟಕ ನಿರ್ಮಾಣ, ಕರ್ನಾಟಕದ ಬ್ರ್ಯಾಂಡ್ ಮರುಸ್ಥಾಪನೆ ಹಾಗೂ ರಾಜ್ಯದಲ್ಲಿ ಹೊಸ ಅಧ್ಯಾಯ ಬರೆಯುವ ದಿನ ಇದಾಗಿದೆ. ಇಂದು ಹೊಸ ಆರಂಭದ ದಿನ. ಲಕ್ಷ್ಮಣ ಸವದಿ ಅವರು ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಅವರು ತಮ್ಮದೇ ಆದ ರೀತಿಯಲ್ಲಿ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಇನ್ನು ಹಿರಿಯ ಮಾಜಿ ಮಂತ್ರಿಗಳಾದ ಶಶಿಕಾಂತ್ ಅವರು ಕೂಡ ರೈತರು, ಬಡವರು, ಅಭಿವೃದ್ಧಿ ವಿಚಾರವಾಗಿ ಸಮಾಜದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ನಾವು ರಾಜಕೀಯವಾಗಿ ಇಷ್ಟು ದಿನ ಎದುರಾಳಿಗಳಿದ್ದವು. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದೆವು. ಆದರೆ ಇಂದು ಸವದಿ ಅವರು ಹೊಸ ನಂಬಿಕೆಯೊಂದಿಗೆ ತಮ್ಮ ಲಕ್ಷಾಂತರ ಕಾರ್ಯಕರ್ತರ ಜತೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದಾರಾಮಯ್ಯ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟು ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದ್ದಾರೆ. ಸವದಿ ಅವರು ರಾಜ್ಯದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಈ ಧೈರ್ಯದ ತೀರ್ಮಾನ ತೆಗೆದುಕೊಂಡಿದ್ದು, ಪಕ್ಷದ ಎಲ್ಲಾ ನಾಯಕರ ಪರವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ.
ಬಿಜೆಪಿ ಪಕ್ಷ ಕುಸಿಯುತ್ತಿದೆ. ಆ ಪಕ್ಷವನ್ನು ಕಟ್ಟಿದವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಸವದಿ ಅವರಿಂದ ಈಶ್ವರಪ್ಪ, ನೆಹರೂ ಓಲೇಕರ್, ಲಿಂಗಣ್ಣ, ಎಂ.ಪಿ ಕುಮಾರಸ್ವಾಮಿ, ರಘುಪತಿ ಭಟ್, ಪುಟ್ಟಣ್ಣ, ನಾಗೇಶ್, ಅಂಗಾರ, ಬೆಟ್ಟಸ್ವಾಮಿ, ಅನಿಲ್ ಬೆನಕೆ, ಮಹದೇವಪ್ಪ, ಗೂಳಿಹಟ್ಟಿ ಶೇಖರ್, ಯು.ಬಿ ಬಣಕಾರ್, ಆರ್. ಶಂಕರ್ ಸೇರಿದಂತೆ ಅನೇಕ ನಾಯಕರನ್ನು ಮೂಲೆಗುಂಪು ಮಾಡಲು ಮುಂದಾಗಿದೆ. ಯಾವ ಕುಟುಂಬ ತಮ್ಮ ಮನೆಯ ಹಿರಿಯರನ್ನು ಗೌರವಿಸುವುದಿಲ್ಲವೋ ಆ ಕುಟುಂಬ ಹೆಚ್ಚು ದಿನ ಉಳಿಯುವುದಿಲ್ಲ. ಅದೇ ರೀತಿ ಪಕ್ಷ ಕಟ್ಟಿದವರನ್ನು ಮೂಲೆಗುಂಪು ಮಾಡಿದರೆ ಪಕ್ಷ ಉಳಿಯುವುದಿಲ್ಲ. ಅದೇ ಕಾರಣಕ್ಕೆ ಬಿಜೆಪಿ ಇಂದು ಕುಸಿಯುತ್ತಿದೆ. 40% ಕಮಿಷನ್ ಸರ್ಕಾರ ಈ ಬಾರಿ 40ಕ್ಕೂ ಕಡಿಮೆ ಕ್ಷೇತ್ರಗಳನ್ನು ಗೆಲ್ಲಲಿದೆ. ಈ ನಾಯಕರು, ಅಧಿಕಾರಕ್ಕಾಗಿ ಪಕ್ಷ ಸೇರುತ್ತಿಲ್ಲ. ಅವರು ಅವರ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ, ಕರ್ನಾಟಕ ಬ್ರ್ಯಾಂಡ್ ಪುನರ್ ಸ್ಥಾಪನೆಗೆ ಈ ತೀರ್ಮಾನ ಮಾಡಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯದ ಗಡಿ ಅಪಾಯದಲ್ಲಿದೆ, ರಾಜ್ಯದ ಸ್ವಾಭಿಮಾನದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಮೇಲೆ ದಾಳಿ ನಡೆಯುತ್ತಿದೆ ಇದೆಲ್ಲದರ ವಿರುದ್ದ ಅವರು ಹೋರಾಟ ಮಾಡುತ್ತಿದ್ದಾರೆ. ಅದೇ ಹೋರಾಟ ನಮ್ಮದಾಗಿದ್ದು, ಈ ಹೋರಾಟ ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆಯ ಅಸ್ಮಿತೆ ಹಾಗೂ ಸ್ವಾಭಿಮಾನದ ರಕ್ಷಣೆಗಾಗಿ ನಡೆಯುತ್ತಿದೆ. ಈ ಕಾರಣಕ್ಕೆ ನಾವು ಇಂದು ಒಂದುಗೂಡುತ್ತಿದ್ದೇವೆ. ಅವರನ್ನು ಮುಕ್ತ ಮನಸ್ಸಿನಿಂದ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ.
ಸವದಿ ಅವರು ನಮ್ಮ ಕುಟುಂಬದ ಪ್ರಮುಖ ಸದಸ್ಯರಾಗಿ ನಮ್ಮ ಮನದಲ್ಲಿ ವಿಶೇಷ ಸ್ಥಾನ ಪಡೆಯಲಿದ್ದೀರಿ. ನಿಮ್ಮ ಸಾರ್ವಜನಿಕ ಜೀವನದ ಅನುಭವವನ್ನು ಕಾಂಗ್ರೆಸ್ ಪಕ್ಷ ಬಳಸಿಕೊಳ್ಳಲಿದೆ.
*ಲಕ್ಷ್ಮಣ ಸವದಿ:*
ಇಂದು ಕಾಂಗ್ರೆಸ್ ಸದಸ್ಯತ್ವ ಪಡೆದು, ಪಕ್ಷ ಸೇರುತ್ತಿದ್ದೇನೆ. ಇಂದು ಭಾರತ ದೇಶದ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನ. ದೇಶಕ್ಕೆ ಸಂವಿಧಾನ ಕೊಟ್ಟವರ ಜನ್ಮದಿನದಂದು ಕಾಂಗ್ರೆಸ್ ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ಪ್ರೇರಣೆ ಸಿಗಲೆಂದು ಪ್ರಾರ್ಥಿಸುತ್ತೇನೆ. ಸುಮಾರು 25 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಅನೇಕ ಹುದ್ದೆ ನಿಭಾಯಿಸಿ, ಆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಿರುವುದರ ಬಗ್ಗೆ ಕೆಲವರಿಗೆ ಪ್ರಶ್ನೆ ಇರಬಹುದು.
ನಿನ್ನೆ ನನ್ನ ಕ್ಷೇತ್ರದ ಕಾರ್ಯಕರ್ತರು ಮಾರ್ಗದರ್ಶಕರ ಜತೆ ಚರ್ಚೆ ಮಾಡಿ ಬಿಜೆಪಿ ತೊರೆಯುತ್ತಿರುವುದರ ಬಗ್ಗೆ ವಿವರಿಸಿ, ನನ್ನ ಮುಂದಿನ ಹೆಜ್ಜೆ ಯಾವ ಕಡೆ ಎಂದು ಕೇಳಿದಾಗ 30 ಸಾವಿರಕ್ಕೂ ಹೆಚ್ಚು ಜನ ನಿಮಗೆ ಮುಂದೆ ಭವಿಷ್ಯ ಇದ್ದರೆ ಅದು ಕಾಂಗ್ರೆಸ್ ಪಕ್ಷ ಸೇರಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಅವರ ಅಪ್ಪಣೆಯಂತೆ ಇಂದು ನಾನು ಬೆಂಗಳೂರಿಗೆ ಬಂದು ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚೆ ಮಾಡಿ ಪಕ್ಷ ಸೇರುತ್ತಿದ್ದೇನೆ.
ಬಿಜೆಪಿಯಲ್ಲಿ ಯಾವ ರೀತಿ ನಿಷ್ಠೆಯಿಂದ ಕೆಲಸ ಮಾಡಿದ್ದೆನೋ, ಅದೇ ರೀತಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಅತ್ಯಂತ ಶ್ರದ್ಧೆಯಿಂದ ಮಾಡಲು ಸಿದ್ಧನಿದ್ದೇನೆ. ಈ ನಾಯಕರೆಲ್ಲರೂ ನನ್ನನ್ನು ಪ್ರೀತಿ ವಿಶ್ವಾಸದಿಂದ ಬರಮಾಡಿಕೊಂಡಿದ್ದಾರೆ. ನಾನು ಬೇರೆ ಪಕ್ಷದಲ್ಲಿದ್ದಾಗಿನಿಂದ ಈ ನಾಯಕರುಗಳು ನನಗೆ ಸ್ನೇಹಿತರಾಗಿದ್ದರು. ವಿಚಾರಧಾರೆಗಳು ಮಾತ್ರ ಬೇರೆ ಇತ್ತು. ರಾಜಕಾರಣದ ಉದ್ದೇಶದಿಂದ ಟೀಕೆ ಟಿಪ್ಪಣಿ ಮಾಡಿದ್ದೆವು. ಇವೆಲ್ಲವನ್ನು ಮರೆತು ಮುಂದಿನ ದಿನಗಳಲ್ಲಿ ನನ್ನನ್ನು ಮನೆ ಮಗನಂತೆ ಭಾವಿಸುವುದಾಗಿ ತಿಳಿಸಿದ್ದು, ಅದಕ್ಕೆ ಧನ್ಯವಾದಗಳು.
ಸವದಿ ಸೋತಾಗ ಉಪಮುಖ್ಯಮಂತ್ರಿ ಮಾಡಿದ್ದರು, ಆದರೂ ಅವರು ಕಾಂಗ್ರೆಸ್ ಯಾಕೆ ಸೇರುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ನಾನು ಸೋತಾಗ ನಾನು ಕಾರ್ಯಕರ್ತನಾಗಿ ಸಂಘಟನೆ ಮಾಡುತ್ತಿದ್ದಾಗ ರಾಷ್ಟ್ರೀಯ ನಾಯಕರು ನನ್ನನ್ನು ಕರೆದು ರಾಜ್ಯದ ಸಚಿವ ಸ್ಥಾನದ ಜತೆಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರು. ಆಪರೇಷನ್ ಕಮಲದ ನಂತರ ನಡೆದ ಉಪಚುನಾವಣೆ ಸಮಯದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಹಿರಿಯರು ನನಗೆ ಬೆಂಬಲ ನೀಡುವಂತೆ ಕೇಳಿದ್ದರು. ಜತೆಗೆ 2023ರಲ್ಲಿ ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಬಿಜೆಪಿಯಲ್ಲಿ ನಾನು 13 ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೆ. ನಾನು ಉಪಮುಖ್ಯಮಂತ್ರಿ, ಮಂತ್ರಿ ಸ್ಥಾನ ಕೇಳಿರಲಿಲ್ಲ. ಆದರೂ ಅವರೇ ನನಗೆ ಈ ಸ್ಥಾನ ನೀಡಿದರು. ಆದರೆ ಆ ಸ್ಥಾನದಿಂದ ಕೆಳಗಿಳಿಸುವಾಗ ಒಂದು ಮಾತು ಹೇಳಲಿಲ್ಲ.
ಒಬ್ಬ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿ ಏಕಕಾಲಕ್ಕೆ ಅಲ್ಲಿಂದ ಕೆಳಗಿಸುವುದು ಅಪಮಾನವೋ, ಸನ್ಮಾನವೋ? ಆಗ ನಾನು ಯಾವುದೇ ಟಿಕೆಟ್ ಮಾಡಲಿಲ್ಲ. ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಸಮಿತಿ ಸದಸ್ಯನಾಗಿದ್ದೆ. ಆಗ ನೀವು ಚರ್ಚೆ ಮಾಡಿದಂತೆ ನನಗೆ ಟಿಕೆಟ್ ನೀಡಬೇಕು ಎಂದು ಕೇಳಿದೆ. ನೀವು ಮಾನದಂಡಗಳ ಆಧಾರದ ಮೇಲೆ ಟಿಕೆಟ್ ನೀಡಬೇಕು ಎಂದು ಹೇಳಿದ್ದೆ. ಆದರೆ ಎಲ್ಲ ಮಾನದಂಡ ಗಾಳಿಗೆ ದೂರಿ ಟಿಕೆಟ್ ಹಂಚಿಕೆ ಮಾಡಿದ್ದು ನೋವು ತಂದಿದ್ದು, ಹೀಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ.
ನನಗೆ ಸಿದ್ದರಾಮಯ್ಯ ಅವರು ಜನತಾ ಪರಿವಾರದಿಂದ ಪರಿಚಯ. ಶಿವಕುಮಾರ್ ಅವರು ಸಹಕಾರಿ ಸಚಿವರಾಗಿದ್ದಾಗ ನಾನು ಯಾವುದೇ ಕೆಲಸ ತೆಗೆದುಕೊಂಡು ಹೋದರೂ ನನಗೆ ಕೆಲಸ ಮಾಡಿಕೊಡುತಿದ್ದರು. ಅವರ ಪ್ರೀತಿ ವಿಶ್ವಾಸ ನನ್ನನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ತಂದು ನಿಲ್ಲಿಸಿದೆ. ಇಂದಿನಿಂದ ಲಕ್ಷ್ಮಣ ಸವದಿಯನ್ನು ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಲ್ಲಿ ಬಳಸಿಕೊಳ್ಳಿ ಎಂದು ಕೇಳುತ್ತೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಹೆಚ್ಚು ಸ್ಥಾನ ಗೆದ್ದು ರಾಜ್ಯಕ್ಕೆ ಉತ್ತಮ ಆಡಳಿತ ನೀಡಲು ನನ್ನ ಅಳಿಲು ಸೇವೆ ಮಾಡಲು ಸಿದ್ಧನಿದ್ದೇನೆ.
ಸವದಿ ಎಲ್ಲಿ ಇರುತ್ತಾನೋ ನಿಷ್ಠೆ ಅಲ್ಲಿರುತ್ತದೆ. ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ನಾನು ಇರುವ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.
*ಪ್ರಶ್ನೋತ್ತರ:*
ಬಿಜೆಪಿ ಆಂತರಿಕವಾಗಿ ಏನಾಗುತ್ತಿದೆ ಎಂದು ಕೇಳಿದಾಗ, ‘ಈ ಎಲ್ಲ ಹುನ್ನಾರಕ್ಕೆ ರಾಜ್ಯದ ಜನ ಮೇ 13ರಂದು ತಕ್ಕ ಪಾಠ ಕಲಿಸುತ್ತಾರೆ’ ಎಂದು ನಂಬಿದ್ದೇನೆ.
ಲಿಂಗಾಯತ ನಾಯಕರ ಮೂಲೆಗುಂಪು ಮಾಡುತ್ತಿದ್ದಾರಾ ಎಂದು ಕೇಳಿದಾಗ, ‘ಎಲ್ಲ ಪಕ್ಷದಲ್ಲೂ ಲಿಂಗಾಯತ ನಾಯಕರಿದ್ದಾರೆ. ಈಗ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಿಂಗಾಯತ ನಾಯಕರು ಆಗಮಿಸುತ್ತಿದ್ದಾರೆ’ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ವಿರುದ್ಧ ಪ್ರಚಾರ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲೇ ಪ್ರಚಾರಕ್ಕೆ ಸೂಚನೆ ನೀಡಿದರೂ ನಾನು ಪ್ರಚಾರ ಮಾಡಲು ಸಿದ್ಧ’ ಎಂದು ಸ್ಪಷ್ಟನೆ ನೀಡಿದರು.