ಹೈದರಾಬಾದ್: ಕೃಷಿ ಸಾಲ ಮನ್ನಾ ಯೋಜನೆಗೆ ಅನುಮೋದನೆ ನೀಡಿರುವ ತೆಲಂಗಾಣ ಸಚಿವ ಸಂಪುಟ, ರೈತು ಭರೋಸಾ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಖಾತ್ರಿಪಡಿಸುವ ಸಲುವಾಗಿ ಸಂಪುಟ ಉಪಸಮಿತಿ ನೇಮಕ ಮಾಡಲು ಶುಕ್ರವಾರ ನಿರ್ಧರಿಸಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ, ವಿಧಾನಸಭೆ ಚುನಾವಣೆಗೂ ಮುನ್ನ ವರಂಗಲ್ನಲ್ಲಿ ಪ್ರಕಟಿಸಿದ ‘ರೈತ ಘೋಷಣೆಯಲ್ಲಿ ಹೇಳಿರುವಂತೆ ಕೃಷಿ ಸಾಲ ಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
‘2018ರ ಡಿಸೆಂಬರ್ 12ರಿಂದ 2023ರ ಡಿಸೆಂಬರ್ 9 ರ ವರೆಗಿನ ಅವಧಿಯಲ್ಲಿ ರೈತರು ತೆಗೆದುಕೊಂಡಿರುವ ಕೃಷಿ ಸಾಲವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ₹31 ಸಾವಿರ ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದರು.
ರೈತು ಭರೋಸಾ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಪಾಡುವುದಕ್ಕಾಗಿ ರಚಿಸಿರುವ ಸಂಪುಟ ಉಪಸಮಿತಿ ನೇತೃತ್ವವನ್ನು ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ವಹಿಸುವರು. ಈ ಉಪಸಮಿತಿಯು ಜುಲೈ 15ರ ಒಳಗಾಗಿ ತನ್ನ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಸಾಲ ಮನ್ನಾ ಮಾಡಲು ಮನವಿ :
ತೆಲಂಗಾಣದಲ್ಲಿ ₹2 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರೈತರ ಸಾಲ ಮನ್ನಾ ಮಾಡಿ ರೈತರನ್ನು ಋಣಮುಕ್ತರನ್ನಾಗಿಸಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಪೆಟ್ರೋಲ್, ಡೀಸೆಲ್ ದರಕ್ಕೆ ಹೋಲಿಕೆ ಮಾಡಿ ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವ ಮುಖ್ಯಮಂತ್ರಿಯವರು ತೆಲಂಗಾಣದ ರೈತರ ಸಾಲ ಮನ್ನಾ ಮಾದರಿಯನ್ನು ಅನುಸರಿಸಲಿ ಎಂದು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ನೀವೇ ಹೇಳಿಕೊಳ್ಳುವಂತೆ ರಾಜ್ಯದ ಬೊಕ್ಕಸ ಭರ್ತಿಯಾಗಿದ್ದರೆ, ಹಣಕಾಸು ಪರಿಸ್ಥಿತಿ ಚೆನ್ನಾಗಿರುವುದು ನಿಜವೇ ಆಗಿದ್ದರೆ, ನಮ್ಮ ರಾಜ್ಯದ ರೈತರ ಸಾಲ ಮನ್ನಾ ಮಾಡಿ’ ಎಂದು ಅಶೋಕ ‘ಎಕ್ಸ್’ ಮೂಲಕ ಸವಾಲು ಹಾಕಿದ್ದಾರೆ.