[ಇಂದು ಪ್ರಾ. ಬಿ. ಎಸ್. ಗವಿಮಠ ಅವರ ಅಮೃತ ಮಹೋತ್ಸವ ನಿಮಿತ್ತ ನೆಹರುನಗರದ ನೂತನ ಕನ್ನಡ ಭವನದಲ್ಲಿ ವಿಚಾರ ಸಂಕಿರಣ ನಡೆಯಲಿದೆ ]
ಬಿ.ಎಸ್.ಗವಿಮಠ ಬೆಳಗಾವಿ ಸಾಹಿತ್ಯ-ಶಿಕ್ಷಣ-ಸಾಂಸ್ಕೃತಿಕ ಕ್ಷೇತ್ರದ ಅಪರೂಪದ ಆಸ್ತಿ ಎನಿಸಿದವರು. ಈ ಐದು ದಶಕಗಳ ಅವಧಿಯಲ್ಲಿ ಬೆಳಗಾವಿ ನೆಲದಲ್ಲಿ ನಡೆದ ಅನೇಕ ಐತಿಹಾಸಿಕ ಘಟನೆಗಳಿಗೆ ಅವರು ಸಾಕ್ಷಿಪ್ರಜ್ಞೆ ಎನಿಸಿದ್ದಾರೆ. ಕೆ.ಎಲ್.ಇ. ಸಂಸ್ಥೆಯ ಇತಿಹಾಸವನ್ನು ಅವರಷ್ಟು ಆಳ-ವಿಸ್ತಾರವಾಗಿ ಹೇಳ ಬಲ್ಲವರು ಮತ್ತೊಬ್ಬರು ಇಲ್ಲ. ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಪ್ರಪಂಚವನ್ನು ಸಿರಿವಂತಗೊಳಿಸಿದ ಬಿ.ಎಸ್.ಗವಿಮಠ ಅವರು ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕೆ.ಎಲ್.ಇ. ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ನಿರಪೇಕ್ಷ ಮನೋಭಾವದಿಂದ ಸೇವೆ ಸಲ್ಲಿಸಿದ್ದಾರೆ. ಅವರ ಶಿಷ್ಯ ಸಂಪತ್ತು ಅಪಾರವಾಗಿದೆ. ಬೆಳಗಾವಿ, ಧಾರವಾಡ, ಹುಬ್ಬಳ್ಳಿಗಳಲ್ಲಿ ಅವರ ಶಿಷ್ಯ ಬಳಗ ಇಂದಿಗೂ ಅವರನ್ನು ತುಂಬ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತದೆ. ಅಂತಃಕರಣ ತುಂಬಿದ ಅವರ ಮಾನವೀಯ ಬೋಧನೆ ಅವರ ವಿದ್ಯಾರ್ಥಿಗಳ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರಿದೆ. ನಾನು ಕಂಡಂತೆ ಅವರೊಬ್ಬ ನಿಸ್ಪೃಹ ಸೇವಾ ಜೀವಿ. ಯಾವುದೇ ಅಧಿಕಾರ-ಪದವಿಗಾಗಿ ಪರಿತಪಿಸಿದವರಲ್ಲ. ಪದವಿ-ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರಲ್ಲ. ಅಂತೆಯೆ ಅವರೊಬ್ಬ ಆದರ್ಶಪ್ರಾಯ ಅನುಕರಣೀಯ ವ್ಯಕ್ತಿಯಾಗಿ ನನಗೆ ಕಂಡಿದ್ದಾರೆ.
ಬಿ.ಎಸ್.ಗವಿಮಠ ಅವರು ನಮ್ಮ ನಾಡಿನ ಅನೇಕ ಮಠಮಾನ್ಯಗಳೊಂದಿಗೆ ಅತ್ಯಂತ ಹಾರ್ದಿಕ-ಸೌಹಾರ್ದ ಸಂಬಂಧವಿಟ್ಟುಕೊಂಡವರು. ಅನೇಕ ಪರಮಪೂಜ್ಯರನ್ನು ಅತ್ಯಂತ ಹತ್ತಿರದಿಂದ ಕಂಡವರು. ಶರಣ ಸಂಸ್ಕೃತಿಯ ಅರಿವು ಆಚಾರ ಸಂಸ್ಕೃತಿ ಸಂಸ್ಕಾರಗಳ ಪ್ರತಿರೂಪವಾಗಿರುವ ಅವರು ತಮ್ಮ ಆದರ್ಶದ ನಡೆ-ನುಡಿಗಳಿಂದ ಪರಿಶುದ್ಧ ಚಾರಿತ್ರ್ಯವಂತರಾಗಿ ಬದುಕಿದವರು.
ನಾನು ಕಳೆದ ಮೂವತ್ತು ವರ್ಷಗಳಿಂದ ಪ್ರಾ. ಬಿ.ಎಸ್.ಗವಿಮಠ ಅವರನ್ನು ತುಂಬ ಹತ್ತಿರದಿಂದ ಬಲ್ಲೆ. ಅವರು ಮಠಗಳೊಂದಿಗೆ ಹೊಂದಿದ ನಿಕಟ ಬಾಂಧವ್ಯವನ್ನು ಕುರಿತು ಗಮನಿಸುತ್ತ ಬಂದವನು. ನನ್ನ ಅರಿವಿನ ಅಲೆಯ ನೆನಪಿನಲ್ಲಿ ಉಳಿದ ಕೆಲವು ವಿಷಯಗಳು ಮತ್ತು ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ನೀಡಿದ ವಿವರಣೆಯ ಆಧಾರದ ಮೇಲೆ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿರುವೆ.
ಬೆಳಗಾವಿ ಇಂದು ಕನ್ನಡದ ನೆಲದಲ್ಲಿ ಉಳಿಯಲು ಪ್ರಯತ್ನಿಸಿದ ಪ್ರಾತಃಸ್ಮರಣೀಯರಲ್ಲಿ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳು ಒಬ್ಬರು. ಪೂಜ್ಯರನ್ನು ಪ್ರಾ. ಗವಿಮಠ ಅವರು ತುಂಬ ಹತ್ತಿರದಿಂದ ಕಂಡವರು. ಪೂಜ್ಯರ ಆತ್ಮೀಯ ವಲಯದಲ್ಲಿ ಒಬ್ಬರಾದವರು. ಶ್ರೀಮಠದಲ್ಲಿ ನಡೆಯುತ್ತಿದ್ದ ನಾಡಹಬ್ಬ, ಇತರ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಗೆ ಪ್ರಯತ್ನಿಸಿದವರು. ಶ್ರೀಗಳು ಅನೇಕ ಜವಾಬ್ದಾರಿಗಳನ್ನು ಪ್ರಾ. ಗವಿಮಠರಿಗೆ ನಿರ್ವಹಿಸಲು ಹೇಳುತ್ತಿದ್ದರು. ಶ್ರೀಗಳು ನೀಡಿದ ಜವಾಬ್ದಾರಿಯನ್ನು ಅತ್ಯಂತ ನಿರ್ವಂಚನೆಯಿಂದ ನಿರ್ವಹಿಸುತ್ತಿದ್ದರು. ಶ್ರೀ ಶಿವಬಸವ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವ
1989 ರಲ್ಲಿ ಅತ್ಯಂತ ಅದ್ದೂರಿಯಿಂದ ಜರುಗಿತು. ಈ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಗಳಾಗಿ ಪ್ರಾ. ಬಿ.ಎಸ್.ಗವಿಮಠ ಅವರು ಅತ್ಯಂತ ಶ್ರದ್ಧೆಯಿಂದ ದುಡಿದರು. ಡಾ. ಆರ್. ಸಿ. ಹಿರೇಮಠ ಅವರಂಥ ಧೀಮಂತ ವಿದ್ವಾಂಸರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದ ‘ಗೌರವಾಭಿನಂದನ ಸಂಪುಟ’ದ ಸಂಪಾದಕರಲ್ಲಿ ಒಬ್ಬರಾಗಿ ಪ್ರಾ. ಬಿ.ಎಸ್. ಗವಿಮಠ ಅವರು ಕಾರ್ಯನಿರ್ವಹಿಸಿದರು. ‘ಶಿವದೀಪ್ತಿ’ ಎಂಬ ಬೃಹತ್ ಅಭಿನಂದನ ಸಂಪುಟವು ಪೂಜ್ಯ ಶ್ರೀಗಳ ಸಾಧನೆಯ ವಿವರಗಳೊಂದಿಗೆ ವಚನ ಸಾಹಿತ್ಯ ಸಂಕಲನಗಳ ಸಮಗ್ರ ಇತಿಹಾಸವನ್ನು ಕಟ್ಟಿಕೊಡುವ ಅಪರೂಪದ ಆಕರಕೃತಿಯಾಗಿ ಹೊರಹೊಮ್ಮಿದೆ.
1993 ರಲ್ಲಿ ಶ್ರೀಮಠದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜರುಗಿತು. ಪೂಜ್ಯ ಶ್ರೀ ಶಿವಬಸವ ಸ್ವಾಮಿಗಳವರ ಅಪೇಕ್ಷೆ ಮೇರೆಗೆ ಪ್ರಾ. ಬಿ.ಎಸ್. ಗವಿಮಠ ಅವರು ‘ಬೆಳಗು’ ಎಂಬ ಸ್ಮರಣ ಗ್ರಂಥವನ್ನು ಸಂಪಾದಿಸಿದರು. ಇದೇ ಸಂದರ್ಭದಲ್ಲಿ ಪ್ರೊ. ಶಿ.ಶಿ.ಬಸವನಾಳರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಶ್ರೀಮಠದ ಅಂಗಳದಲ್ಲಿ ಬಿ.ಎಸ್.ಗವಿಮಠ ಅವರು ಸಂಚಾಲಕರಾಗಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು. ಬಸವನಾಳರ ಶತಮಾನೋತ್ಸವ ಈ ಸವಿನೆನಹಿನಲ್ಲಿ ಎಚ್.ಎಫ್.ಕಟ್ಟೀಮನಿ ಅವರು ಬರೆದ ‘ಶಿ.ಶಿ.ಬಸವನಾಳ’ ಎಂಬ ಪುಸ್ತಕ ಪ್ರಕಟಗೊಳ್ಳುವ ಮೂಲಕ ಶ್ರೀಮಠದ ವೀರಶೈವ ಅಧ್ಯಯನ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು.
ಹೀಗೆ ಪೂಜ್ಯ ಶ್ರೀ ಶಿವಬಸವ ಸ್ವಾಮಿಗಳೊಂದಿಗೆ ಪ್ರಾ. ಬಿ.ಎಸ್.ಗವಿಮಠ ಅವರು ನಿರಂತರ ಒಡನಾಟ ಹೊಂದಿದ್ದರು. ನೂರೈದು ವರ್ಷದ ಶತಾಯುಷಿ ಪೂಜ್ಯರು ಕೂಡ ಇವರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಿದ್ದರು. ಈ ಮಧ್ಯೆ ಪೂಜ್ಯ ಪ್ರಭುದೇವರು ಶ್ರೀಮಠವನ್ನು ವಿಸ್ತಾರೋನ್ನತವಾಗಿ ಬೆಳೆಸಲು ಕೃತಸಂಕಲ್ಪರಾಗಿ ಕಾರ್ಯೋನ್ಮುಖರಾಗಿದ್ದರು. ಪೂಜ್ಯ ಪ್ರಭುದೇವರೊಂದಿಗೂ ಕೂಡ ಪ್ರಾ. ಗವಿಮಠ ಅವರು ಅಷ್ಟೇ ಆತ್ಮೀಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. 1987 ರಲ್ಲಿ ಪೂಜ್ಯ ಪ್ರಭುದೇವರು ಆಕಸ್ಮಿಕವಾಗಿ ಲಿಂಗೈಕ್ಯರಾದರು. ಆ ಸಂದರ್ಭದಲ್ಲಿ ಬಿ.ಎಸ್.ಗವಿಮಠ ಅವರು ಪೂಜ್ಯ ಪ್ರಭುದೇವರನ್ನು ಕುರಿತು ಅತ್ಯಂತ ಅಧಿಕೃತ ಮಾಹಿತಿ ಇರುವ ಲೇಖನ ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿದರು.
1988 ಏಪ್ರಿಲ್ 11 ರಂದು ನಾಗನೂರು ರುದ್ರಾಕ್ಷಿಮಠದ ನೂತನ ಉತ್ತರಾಧಿಕಾರಿಗಳು ಬೀಳಗಿ ಕಲ್ಮಠದ ಪೂಜ್ಯ ಶ್ರೀ ಗುರುಪಾದ ದೇವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಒಂದು ಘಟನೆಯನ್ನು ಪ್ರಾ. ಬಿ.ಎಸ್. ಗವಿಮಠ ಅವರು ಹೀಗೆ ಸ್ಮರಿಸಿಕೊಳ್ಳುತ್ತಾರೆ :
‘ಗುರುಪಾದ ದೇವರು ತಮ್ಮ 13 ನೇ ವಯಸ್ಸಿನಲ್ಲಿ ಬೀಳಗಿ ಕಲ್ಮಠದ ಪೀಠ ಅಲಂಕರಿಸಿದರೆ 31ನೇ ವಯಸ್ಸಿನಲ್ಲಿ ನಾಗನೂರು ಶ್ರೀಮಠದ ಪೀಠಾಧಿಪತಿಯಾದರು, ಸಿದ್ಧರಾಮಸ್ವಾಮಿಗಳಾಗಿ ಬೆಳಗಾವಿಗೆ ಬೆಳಕಾಗಿ ಬಂದರು. ಬಹುಭಾಷಾ ಪಂಡಿತರಾದ ಇವರು ತತ್ವಶಾಸ್ತ್ರ ಹಾಗೂ ಹಿಂದಿ – ಸಂಸ್ಕೃತಗಳಲ್ಲಿ ಬನಾರಸ್ ವಿ.ವಿ. ಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಗುರುಪಾದ ದೇವರನ್ನು ಊರ ಹಿರಿಯರೊಂದಿಗೆ ಬೀಳಗಿಯ ಮಾಜಿ ಶಾಸಕ ಜೆ. ಟಿ. ಪಾಟೀಲರು ಬೆಳಗಾವಿಗೆ ಕರೆದುಕೊಂಡು ಬಂದರು. ಪೀಠಾರೋಹಣ ಸಮಾರಂಭಕ್ಕೆ ಮುಂಚೆ ನನಗೆ ಅವರು ಹೇಳಿದ ಒಂದು ಮಾತು- ಹೃದಯವನ್ನು ತಟ್ಟಿ ಹೋಯಿತು. ಅವರು ಭಾವುಕರಾಗಿ ‘ಗವಿಮಠರೇ, ನಮ್ಮ ಗುರುಪಾದದೇವರನ್ನು ನೀವು ಬೆಳಗಾವಿಯವರು ಚೆನ್ನಾಗಿ ನೋಡಿಕೊಳ್ಳಬೇಕು, ಇಲ್ಲಂದ್ರ ನಮ್ಮ ದೇರ್ನ ನಾವು ಹೊರಳಿ ಕರಕೊಂಡ್ ಹೊಕ್ಕೇವಿ’ ಎಂದಾಗ ಅವರು ತಮ್ಮ ಮಗಳನ್ನೇ ಗಂಡನ ಮನೆಗೆ ಕಳಿಸಲು ಬಂದ ತಂದೆಯಂತೆ ಕಂಡರು. 1988 ರ ಏಪ್ರಿಲ್ 11 ರಂದು ನಾಗನೂರ ಶ್ರೀಮಠದ ಪೀಠಾಧಿಪತಿಯಾದ ಸಿದ್ಧರಾಮಸ್ವಾಮಿಗಳು ಕಳೆದ 25 ವರ್ಷಗಳಲ್ಲಿ ಶ್ರೀಮಠವನ್ನು ನಾನಾ ವಿಧದಲ್ಲಿ ಅಭಿವೃದ್ಧಿಪಡಿಸಿದ ರೀತಿ ವಿಸ್ಮಯವನ್ನುಂಟು ಮಾಡುತ್ತದೆ.’ (ಬೆಳಗಾವಿ ಬೆಳಗು ಪು. 159)
ಪೂಜ್ಯ ಡಾ. ಸಿದ್ಧರಾಮ ಮಹಾಸ್ವಾಮಿಗಳವರೊಂದಿಗೂ ಅವರದು ಅಷ್ಟೇ ಆತ್ಮೀಯ ನಿಕಟ ಒಡನಾಟವಿದೆ. ಪೂಜ್ಯರೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಅವರು ವೇದಿಕೆ ಹಂಚಿಕೊಂಡಿದ್ದಾರೆ. ಕೆಲವು ಕಾರ್ಯಕ್ರಮಗಳನ್ನು ಗವಿಮಠ ಅವರು ಆಯೋಜಿಸಿದ ಸಂದರ್ಭದಲ್ಲಿ ಶ್ರೀಗಳು ಭಾಗವಹಿಸಿದ್ದಾರೆ. ಹೀಗೆ ನೂರಾರು ಕಾರ್ಯಕ್ರಮಗಳು ಪೂಜ್ಯರ ಸಾನಿಧ್ಯದಲ್ಲಿ ಪ್ರಾ. ಗವಿಮಠ ಅವರು ಅತಿಥಿಗಳಾಗಿ ಮಾತನಾಡಿದ್ದಾರೆ. ನನ್ನ ನೆನಪಿನಾಳದಲ್ಲಿ ಉಳಿದ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುವುದಾದರೆ- 1996 ರಲ್ಲಿ ಕೆ.ಎಲ್.ಇ. ಸಂಸ್ಥೆಯ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆ ಜರುಗಿತು. ಬೃಹತ್ ಆಸ್ಪತ್ರೆ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಂದ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನಮ್ಮ ನಾಡಿನ ಹಿರಿಯ ಪರಮಪೂಜ್ಯರ ಪೂಜೆ ನೆರವೇರಿತು. ಗದಗ ತೋಂಟದಾರ್ಯಮಠದ, ನಿಡಸೋಸಿ ದುರದುಂಡೀಶ್ವರಮಠದ ಪೂಜ್ಯರನ್ನು ಮೊದಲುಗೊಂಡು ಅನೇಕ ಜನ ಶ್ರೀಗಳು ಆಗಮಿಸಿದ್ದರು. ಪೂಜ್ಯರ ಆತಿಥ್ಯ ನಿರ್ವಹಣೆಯ ಜವಾಬ್ದಾರಿಯನ್ನು ಪ್ರಭಾಕರ ಕೋರೆ ಅವರು ಪ್ರಾ. ಬಿ.ಎಸ್. ಗವಿಮಠ ಅವರಿಗೆ ಒಪ್ಪಿಸಿದ್ದರು. ಪೂಜ್ಯರೆಲ್ಲರು ಬಂದು ಪೂಜೆ ಪ್ರಸಾದ ಸ್ವೀಕರಿಸಿ ಸಂಸ್ಥೆಯು ಉತ್ತರೋತ್ತರ ಬೆಳೆಯಲೆಂದು ಹಾರೈಸಿದರು. 2003 ರಲ್ಲಿ ಕೆ.ಎಲ್.ಇ. ಸಂಸ್ಥೆಯವರು ದೆಹಲಿಯಲ್ಲಿ ಬಸವ ಇಂಟರ್ನ್ಯಾಷನಲ್ ಸ್ಕೂಲ್ ಪ್ರಾರಂಭಿಸಿದರು. ಈ ಶಾಲೆಯ ಉದ್ಘಾಟನಾ ಸಮಾರಂಭಕ್ಕೆ ಅನೇಕ ಶ್ರೀಗಳನ್ನು ಬರಮಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ ಕೀರ್ತಿ ಪ್ರಾ. ಗವಿಮಠ ಅವರಿಗೆ ಸಲ್ಲಬೇಕು.
ಪ್ರಾ. ಬಿ.ಎಸ್.ಗವಿಮಠ ಅವರು ವೃತ್ತಿರಂಗಭೂಮಿ ಚಿಂತಕರು. ಅವರ ಚಿಂತನೆಯ ಫಲವಾಗಿ ‘ಕರ್ನಾಟಕ ರಂಗಭೂಮಿ ಸಹಕಾರಿ ಸಂಘ’ ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಸಂಘದ ಪ್ರಾರಂಭೋತ್ಸವವನ್ನು ಪೂಜ್ಯ ಡಾ. ಸಿದ್ಧರಾಮ ಶ್ರೀಗಳೇ ನೆರವೇರಿಸಿದರು. 1993 ರಲ್ಲಿ ನಾಟ್ಯಭೂಷಣ ಏಣಗಿ ಬಾಳಪ್ಪನವರಿಗೆ ಕರ್ನಾಟಕ ಘನ ಸರಕಾರದ ಪ್ರಥಮ ‘ಗುಬ್ಬಿ ವೀರಣ್ಣ ಪ್ರಶಸ್ತಿ’ ಲಭಿಸಿತು. ಈ ಸವಿನೆನಪಿಗಾಗಿ ಸಂಕೇಶ್ವರದಲ್ಲಿ ನಾಗರಿಕ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಪೂಜ್ಯ ಡಾ. ಸಿದ್ಧರಾಮ ಶ್ರೀಗಳು ಡಾ. ರಾಜಕುಮಾರ ಮೊದಲಾದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಮಾರಂಭ ಯಶಸ್ವಿಯಾಗುವಲ್ಲಿ ಪ್ರಾ. ಬಿ.ಎಸ್.ಗವಿಮಠ ಅವರು ವಹಿಸಿದ ಪಾತ್ರ ಸ್ಮರಣೀಯವಾದುದು.
ಪ್ರಾ. ಬಿ.ಎಸ್.ಗವಿಮಠ ಅವರು ಬರೆದ ‘ನಿಮ್ಮ ನೆನೆದಾಗಲೇ ಉದಯ’ ಎಂಬ ಕೃತಿ ಬಿಡುಗಡೆ ಸಮಾರಂಭವು ನಾಗನೂರು ಶ್ರೀಗಳ ಸಾನಿಧ್ಯದಲ್ಲಿಯೇ ಜರುಗಿತು. ಈ ಸಮಾರಂಭದಲ್ಲಿ ನಾಡೋಜ ಏಣಗಿ ಬಾಳಪ್ಪ, ಡಾ. ಪಾಟೀಲ ಪುಟ್ಟಪ್ಪ ಭಾಗವಹಿಸಿದ್ದರು. ಹಾಗೆಯೇ ಡಾ. ಪ್ರಭಾಕರ ಕೋರೆ ಅವರಿಗೆ ಸಾರ್ಥಕ ಅರವತ್ತು ಸಂವತ್ಸರಗಳು ತುಂಬಿದ ಸಂದರ್ಭದಲ್ಲಿ ‘ಸ್ಪಂದನ’ ಎಂಬ ಮೌಲಿಕ ಅಭಿನಂದನ ಗ್ರಂಥವನ್ನು ಪ್ರಾ. ಬಿ.ಎಸ್.ಗವಿಮಠ ಅವರು ತುಂಬ ಶ್ರಮ-ಶ್ರದ್ಧೆಯಿಂದ ಸಂಪಾದಿಸಿದ್ದರು. ಈ ಕೃತಿಯನ್ನು ಲೋಕಾರ್ಪಣೆ ಮಾಡಿದವರು ಪೂಜ್ಯ ಡಾ. ಸಿದ್ಧರಾಮ ಸ್ವಾಮಿಗಳು.
ಪೂಜ್ಯ ಶ್ರೀ ಡಾ. ಸಿದ್ಧರಾಮ ಸ್ವಾಮಿಗಳು ಪ್ರತಿವರ್ಷ ಡಿಶಂಬರ 7 ಮತ್ತು 8 ರಂದು ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಿಂದ ಆಚರಿಸುತ್ತಾರೆ. 2007 ಡಿಶಂಬರದಲ್ಲಿ ಪೂಜ್ಯರು ಸ್ಥಾಪಿಸಿದ ಪ್ರಸಾದ ನಿಲಯದ ಅಮೃತ ಮಹೋತ್ಸವ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಶ್ರೀಮಠದ ಇತಿಹಾಸ ಸಂಸ್ಕೃತಿಗಳ ಕುರಿತು ಪ್ರಾ. ಬಿ.ಎಸ್. ಗವಿಮಠ ಅವರು ವಿಶೇಷ ಉಪನ್ಯಾಸ ನೀಡಿದರು.
2014 ಡಿಶಂಬರ 8 ರಂದು ಪೂಜ್ಯರ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯ ಡಾ. ಸಿದ್ಧರಾಮ ಮಹಾಸ್ವಾಮಿಗಳು ಪ್ರಾ. ಬಿ.ಎಸ್. ಗವಿಮಠ ಅವರಿಗೆ ‘ಸಮಾಜ ಸೇವಾರತ್ನ’ ಎಂಬ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. 2016 ರಲ್ಲಿ ಕೆ.ಎಲ್.ಇ. ಸಂಸ್ಥೆಯ ಶತಮಾನೋತ್ಸವ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳ ಸಾನಿಧ್ಯದಲ್ಲಿ ಪ್ರಾ. ಗವಿಮಠ ಅವರು ಬರೆದ ‘ನೂರರ ಬೆಳಗು’ ಎಂಬ ಅಪರೂಪದ ಬೃಹತ್ ಕೃತಿ ಲೋಕಾರ್ಪಣೆಗೊಂಡಿತು. ಹೀಗೆ ನಾಗನೂರು ಮಠದ ಮೂರು ಜನ ಪೂಜ್ಯರೊಂದಿಗೆ ಪ್ರಾ. ಬಿ.ಎಸ್. ಗವಿಮಠ ಅವರು ಅತ್ಯಂತ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡಿದ್ದರು.
ಪ್ರಾ. ಬಿ.ಎಸ್.ಗವಿಮಠ ಅವರು ಕಾರಂಜಿಮಠದ ಶ್ರೀಗಳೊಂದಿಗೂ ಆತ್ಮೀಯ ಒಡನಾಟ ಇಟ್ಟುಕೊಂಡವರು. ನಾನು ಇತ್ತೀಚೆಗೆ ಪೂಜ್ಯರನ್ನು ಕಂಡು ಪ್ರಾ. ಬಿ.ಎಸ್.ಗವಿಮಠ ಅವರೊಂದಿಗೆ ಅವರ ಒಡನಾಟದ ಕ್ಷಣಗಳನ್ನು ಕುರಿತು ಕೇಳಿದೆ. ಪೂಜ್ಯರು ಅನೇಕ ಘಟನೆಗಳನ್ನು ನೆನಪಿಸಿಕೊಂಡರು. ಮುಖ್ಯವಾಗಿ ಒಂದು ಮಾತನ್ನು ಹೇಳಿದರು: ‘ಬೆಳಗಾವಿಯಲ್ಲಿ ಅನೇಕ ಲಿಂಗಾಯತ ಮಠಗಳಿದ್ದವು. ಕಾರಂಜಿಮಠ, ಕಲ್ಮಠ, ಗೊಂಬಿಮಠ, ಜಡಿಮಠ, ಹೊಸಮಠ, ಚಂದ್ರಶೇಖರಮಠ, ಗಣಾಚಾರಿ ಮಠ ಹೀಗೆ ಹತ್ತಾರು ಮಠಗಳಿದ್ದವು. ಆದರೆ ಕಾಲಗರ್ಭದಲ್ಲಿ ಎಲ್ಲವೂ ಕರಗಿ ಈಗ ಕಾರಂಜಿಮಠ ಒಂದೇ ಬೆಳಗಾವಿ ಮೂಲಮಠವಾಗಿ ಉಳಿದುಕೊಂಡಿದೆ. ಈ ಮಠಗಳ ಒಟ್ಟು ಇತಿಹಾಸ ಪ್ರಾ. ಗವಿಮಠ ಸರ್ ಅವರಿಗೆ ಗೊತ್ತಿರುವಷ್ಟು ಮತ್ತಾರಿಗೂ ಗೊತ್ತಿಲ್ಲ. ಬೆಳಗಾವಿಯ ನಗರದ ಸಮಗ್ರ ಧಾರ್ಮಿಕ ಇತಿಹಾಸ ಅವರ ತುದಿ ನಾಲಿಗೆ ಮೇಲಿದೆ.’ ಎಂದು ಹೇಳಿದರು. ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ನೂತನ ಕಾರಂಜಿಮಠವನ್ನು ಶಿವಬಸವನಗರದಲ್ಲಿ ನಿರ್ಮಿಸಿದ ನಂತರ, ಅಲ್ಲಿ ನಿರಂತರ ಶಿವಾನುಭವ ಸಮಾರಂಭಗಳು ಜರುಗುತ್ತಿವೆ. ಇಂಥ ಅನೇಕ ಶಿವಾನುಭವಗಳಲ್ಲಿ ಪ್ರಾ. ಗವಿಮಠ ಅವರು ಅತಿಥಿಗಳಾಗಿ, ಅಧ್ಯಕ್ಷರಾಗಿ ಆಗಮಿಸಿ ಮಾರ್ಮಿಕ ಮಾತುಗಳನ್ನು ಆಡಿದ್ದಾರೆ.
ಪ್ರಾ. ಬಿ.ಎಸ್.ಗವಿಮಠ ಅವರು ನಮ್ಮ ನಾಡಿನ ಬಹುತೇಕ ಪ್ರಮುಖ ಮಠಾಧೀಶರಿಗೆ ಚಿರಪರಿಚಿತರು. ಕೆ.ಎಲ್.ಇ. ಸಂಸ್ಥೆಯು ಪ್ರತಿವರ್ಷ ನವೆಂಬರ್ 13 ರಂದು ಸಂಸ್ಥಾಪನ ದಿನವನ್ನಾಗಿ ಆಚರಿಸುತ್ತದೆ. ಈ ಸಂದರ್ಭದಲ್ಲಿ ನಮ್ಮ ನಾಡಿನ ಪ್ರಮುಖ ಮಠಾಧೀಶರನ್ನು ಆಹ್ವಾನಿಸುತ್ತಾರೆ. ಈ ಜವಾಬ್ದಾರಿಯನ್ನು ಪ್ರಾ. ಬಿ.ಎಸ್. ಗವಿಮಠ ಅವರು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ಕೆ.ಎಲ್.ಇ. ಸಂಸ್ಥೆಗೆ ಸಿದ್ಧಗಂಗಾ, ಆದಿಚುಂಚನಗಿರಿ, ಸಿರಿಗೆರೆ, ಚಿತ್ರದುರ್ಗ, ಕೊಪ್ಪಳ ಮೊದಲಾದ ಶ್ರೀಗಳು ಆಗಮಿಸುವಲ್ಲಿ ಪ್ರಾ. ಗವಿಮಠ ಅವರ ಒತ್ತಾಸೆಯೆ ಕಾರಣವೆನ್ನಬೇಕು.
ಗದಗ ತೋಂಟದಾರ್ಯಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪ್ರಾ. ಗವಿಮಠ ಅವರನ್ನು ಅನೇಕ ವರ್ಷಗಳಿಂದ ಬಲ್ಲವರು. ಅವರೊಮ್ಮೆ ಸಮಾರಂಭವೊಂದರಲ್ಲಿ ಪ್ರಾ. ಬಿ.ಎಸ್.ಗವಿಮಠ ಅವರಂಥ ನಿಸ್ವಾರ್ಥ ನಿರಪೇಕ್ಷ ಮನೋಭಾವದ ಅಧ್ಯಾಪಕರಿಂದಲೇ ಕೆ.ಎಲ್.ಇ. ಸಂಸ್ಥೆಗೆ ಕೀರ್ತಿ ಮತ್ತು ಶ್ರೇಯಸ್ಸು ಪ್ರಾಪ್ತವಾಗಿದೆ ಎಂದು ಹೇಳಿದ್ದರು. ಪೂಜ್ಯರು ತಮ್ಮ ಶ್ರೀಮಠದ ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಲಿಂಗಾಯತ ಪುಣ್ಯಪುರುಷರ ಚರಿತ್ರೆಗಳನ್ನು ಪ್ರಕಟಿಸುತ್ತಾರೆ. ಈ ಮಾಲಿಕೆಯಲ್ಲಿ ಪ್ರಾ. ಬಿ.ಎಸ್. ಗವಿಮಠ ಅವರು ಎರಡು ಮೌಲಿಕ ಕೃತಿಗಳನ್ನು ಬರೆದುಕೊಟ್ಟಿದ್ದಾರೆ. 1. ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು, 2. ನಾಟ್ಯಭೂಷಣ ಏಣಗಿ ಬಾಳಪ್ಪನವರು. ಈ ಎರಡು ಕೃತಿಗಳು ಅಪಾರ ಜನಮನ್ನಣೆ ಪಡೆದಿವೆ.
2009 ರಲ್ಲಿ ಸಿದ್ಧಗಂಗಾಮಠದ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಜನ್ಮಶತಮಾನೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ನೂರು ಮೌಲಿಕ ಕೃತಿಗಳನ್ನು ಶ್ರೀಮಠ ಪ್ರಕಟಿಸಿತು. ಈ ನೂರರ ಮಾಲಿಕೆಯಲ್ಲಿ ಪ್ರಾ. ಬಿ.ಎಸ್.ಗವಿಮಠ ಅವರ ‘ಶಿ.ಶಿ.ಬಸವನಾಳ ಜೀವನ ಮತ್ತು ಸಾಧನೆ’ ಎಂಬ ಕೃತಿ ಪ್ರಕಟಗೊಂಡಿದೆ. ಈ ಸಂದರ್ಭದಲ್ಲಿ ನನ್ನ ಮತ್ತು ಡಾ. ಮರಾಠೆ ಅವರ ಕೃತಿಗಳು ಪ್ರಕಟಗೊಂಡಿದ್ದವು. ನಾವು ಮೂವರು ಕೂಡಿ ಸಿದ್ಧಗಂಗಾ ಮಠಕ್ಕೆ ಹೋದೆವು. ಬೆಳಿಗ್ಗೆ ಸ್ನಾನ ಮುಗಿಸಿ ಹೊರಗೆ ಬಂದಾಗ ನಡೆದಾಡುವ ದೇವರು, ಕರ್ನಾಟಕರತ್ನ ಡಾ. ಶಿವಕುಮಾರ ಮಹಾಸ್ವಾಮಿಗಳು ತಮ್ಮ ಕಚೇರಿಯಲ್ಲಿ ವಿರಾಜಮಾನರಾಗಿದ್ದರು. ನಾವು ಮೂವರು ಅವರ ಕಚೇರಿ ಪ್ರವೇಶಿಸಿ ನಮಸ್ಕರಿಸಿದೆವು. ಪ್ರಾ. ಗವಿಮಠ ಅವರು ತಮ್ಮ ಪರಿಚಯ ಹೇಳಿಕೊಂಡರು. ಆಗ ಪೂಜ್ಯರು ಕೆ.ಎಲ್.ಇ. ಸಂಸ್ಥೆಯ ಪ್ರಸಾರಾಂಗ ಉತ್ತಮ ಕಾರ್ಯ ಮಾಡುತ್ತಿದೆ. ಪ್ರಸಾರಾಂಗದ ನಿರ್ದೇಶಕರಾದ ನಿಮ್ಮ ಪರಿಶ್ರಮದಿಂದ ಪ್ರಕಟಗೊಂಡ ‘ಅರಟಾಳ ರುದ್ರಗೌಡರ’ ಚರಿತ್ರೆಯಂತೂ ನಮ್ಮ ಸಮಾಜದ ನೂರು ವರುಷಗಳ ಸ್ಥಿತಿ ಗತಿಗಳನ್ನು ಅತ್ಯಂತ ವಸ್ತುನಿಷ್ಟವಾಗಿ ವಿವರಿಸುತ್ತದೆ. ಇಂಥ ಮೌಲಿಕ ಕೃತಿಗಳನ್ನು ಪ್ರಕಟಿಸಿದ ನಿಮ್ಮ ಶ್ರಮ ಸಾರ್ಥಕವಾಗಿದೆ’ ಎಂದು ಪೂಜ್ಯರು ಹೇಳಿದಾಗ ನನಗೆ ರೋಮಾಂಚನವಾಯಿತು. ಪ್ರಾ. ಗವಿಮಠ ಅವರ ಉತ್ಕೃಷ್ಟಮಟ್ಟದ ಕೆಲಸಗಳು ನಾಡವರ ಗಮನ ಸೆಳೆದಿರುವುದು ನನ್ನ ಗಮನಕ್ಕೆ ಬಂದು, ಅವರ ಬಗೆಗಿನ ನನ್ನ ಗೌರವ ಇಮ್ಮಡಿಯಾಯಿತು.
ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಪೂಜ್ಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಪ್ರಾ. ಬಿ.ಎಸ್.ಗವಿಮಠ ಅವರ ಬಗ್ಗೆ ತುಂಬ ಗೌರವ ಇಟ್ಟುಕೊಂಡವರು. ಪ್ರಾ. ಗವಿಮಠ ಅವರು ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಶ್ರೀಗಳು ಸಾನಿಧ್ಯ ವಹಿಸಿ ಅಭಿಮಾನದ ಮಾತುಗಳನ್ನು ಆಡಿದ್ದರು.
ಪ್ರಾ. ಬಿ.ಎಸ್.ಗವಿಮಠ ಅವರು ನಾರಾಯಣ ಬಾಮಣಗಾಂವಕರ ಎಂಬುವರು ಮರಾಠಿಯಲ್ಲಿ ಬರೆದ ‘ಪುಣ್ಯಶ್ಲೋಕ ವಾರದ ಮಲ್ಲಪ್ಪ’ ಎಂಬ ಕೃತಿಯನ್ನು ಕನ್ನಡದಲ್ಲಿ ಅನುವಾದಿಸಿದರು. ಈ ಅನುವಾದಿತ ಕೃತಿಯನ್ನು ಡಾ. ಎಂ. ಎಂ. ಕಲಬುರ್ಗಿ ಅವರು ಪರಿಶೀಲಿಸಿ, ಅನುವಾದ ತುಂಬ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯ ಪಟ್ಟು ಬೆನ್ನುಡಿ ಬರೆದು ಗವಿಮಠರ ಕಾರ್ಯವನ್ನು ಶ್ಲಾಘಿಸಿದರು. ಈ ಕೃತಿಯನ್ನು ಪ್ರಕಟಿಸಿದವರು ಕಿತ್ತೂರು ರಾಜಗುರು ಸಂಸ್ಥಾನಕಲ್ಮಠದ ಪೂಜ್ಯ ಮಡಿವಾಳ ಸ್ವಾಮಿಗಳು. ಈ ಕೃತಿ ಲೋಕಾರ್ಪಣೆ ಕಿತ್ತೂರು ಕಲ್ಮಠದಲ್ಲಿ ಜರುಗಿತು. ಈ ಸಮಾರಂಭದಲ್ಲಿ ಕಿತ್ತೂರು ಶ್ರೀಗಳು, ನಾಗನೂರು ಶ್ರೀಗಳು ಡಾ. ಎಂ. ಎಂ. ಕಲಬುರ್ಗಿ ಮೊದಲಾದವರು ಭಾಗವಹಿಸಿದ್ದರು.
ಪ್ರಾ. ಗವಿಮಠ ಅವರ ಊರು ಹುಕ್ಕೇರಿ ತಾಲೂಕಿನ ‘ಬಸಾಪುರ’ ಗ್ರಾಮ. ಈ ಗ್ರಾಮದಲ್ಲಿ ‘ಗವಿಸಿದ್ಧೇಶ್ವರಮಠ’ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಈ ಮಠದ ಅಭಿವೃದ್ಧಿಗಾಗಿಯೂ ಪ್ರಾ. ಗವಿಮಠ ಅವರು ಸೇವೆ ಸಲ್ಲಿಸಿದ್ದಾರೆ.
ಬೆಳಗಾವಿ ಸಮೀಪದ ಬಡೇಕೊಳ್ಳ ನಾಗಯ್ಯಜ್ಜನ ಮಠ ತುಂಬ ಪ್ರಸಿದ್ಧವಾದುದು. ನಾಗಯ್ಯಜನ ಲಿಂಗಲೀಲಾ ಬದುಕು ಭಕ್ತರಿಗೆ ಆಪ್ಯಾಯಮಾನ. ಈ ಮಠದ ಇತಿಹಾಸವನ್ನು ಕಟ್ಟಿಕೊಡುವ ಕೆಲಸವನ್ನು ಪ್ರಾ. ಬಿ.ಎಸ್.ಗವಿಮಠ ಅವರು ಮಾಡಿದ್ದಾರೆ. ಹೀಗೆ ವಿವರಿಸುತ್ತ ಹೋದರೆ ಇನ್ನೂ ಅನೇಕ ಘಟನೆಗಳನ್ನು ನೆನಪಿಸಿಕೊಳ್ಳಬಹುದು.
ವಿಜಯಪುರ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳು ಮೊದಲು ಮಾಡಿಕೊಂಡು ಕರ್ನಾಟಕದ ಅನೇಕ ಮಠಗಳ ಶ್ರೀಗಳು ಪ್ರಾ. ಗವಿಮಠ ಅವರ ಸೇವೆಯನ್ನು ಗಮನಿಸಿದವರು. ಅವರ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸಿದ್ದಾರೆ.
ಅನೇಕ ಶ್ರೀಮಠಗಳ ಸಂಪರ್ಕದಲ್ಲಿರುವ ಪ್ರಾ. ಗವಿಮಠ ಅವರು ಯಾವುದೇ ಫಲಾಪೇಕ್ಷೆ ಇಟ್ಟುಕೊಂಡವರಲ್ಲ. ನಿರ್ವಂಚನೆಯ ಶುದ್ಧಭಕ್ತಿಯಿಂದ ನಡೆದುಕೊಂಡವರು. ಅನೇಕ ಶ್ರೀಗಳ ಆತ್ಮೀಯ ಒಡನಾಟವಿದ್ದರೂ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಎಂದೂ ವಿನಂತಿಸಿಕೊಂಡವರಲ್ಲ. ಅಂಥ ಪರಿಶುದ್ಧ ಚಾರಿತ್ರ್ಯವಂತರು ಅವರು.
ಪ್ರಾ. ಬಿ.ಎಸ್.ಗವಿಮಠ ಅವರಂಥ ಹಿರಿಯರು ಬೆಳಗಾವಿಗೆ ಭೂಷಣಪ್ರಾಯವೆನಿಸಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಅವರು ಸದಾ ಕ್ರಿಯಾಶೀಲರಾಗಿದ್ದಾರೆ. ‘ಬೆಳಗಾವಿ’ ನಗರದ ಇತಿಹಾಸವನ್ನು ಕುರಿತು ಬೃಹತ್ ಗ್ರಂಥವನ್ನು ರಚಿಸುತ್ತಿದ್ದಾರೆ. ಅವರು ಇನ್ನೂ ನೂರ್ಕಾಲ ನಮ್ಮ ಮಧ್ಯದಲ್ಲಿದ್ದು ನಮ್ಮ ನಾಡಿಗೆ ಮಾರ್ಗದರ್ಶನ ನೀಡುತ್ತಿರಲಿ ಎಂದು ಆಶಿಸುವೆ.
* ಪ್ರಕಾಶ ಗಿರಿಮಲ್ಲನವರ