ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಕನ್ನಡದ ಕುಳ್ಳ ಎಂದೇ ಹೆಸರುವಾಸಿಯಾಗಿದ್ದ ದ್ವಾರಕೀಶ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ದ್ವಾರಕೀಶ್ ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿಯನ್ನು ಕುಟುಂಬದವರು ಖಚಿತಪಡಿಸಿದ್ದಾರೆ.
ಕರುನಾಡ ಕುಳ್ಳ, ಮನೋಜ್ಞ ನಟನೆಯ ಮೂಲಕ ಮನೆಮಾತಾಗಿದ್ದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (81) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದ್ವಾರಕೀಶ್ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ದ್ವಾರಕೀಶ್ ಅವರ ಅಗಲಿಕೆಗೆ ಸ್ಯಾಂಡಲ್ವುಡ್ ನಟರು ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
1942ರ ಆಗಸ್ಟ್ 19ರಂದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಸಿದ ಅವರು ನಟನೆಯ ಮೂಲಕವೇ ಮನೆಮಾತಾಗಿದ್ದರು. ಇವರ ತಂದೆ ಶಾಮರಾವ್ ಹಾಗೂ ತಾಯಿ ಜಯಮ್ಮ. ಶಾರದಾ ವಿಲಾಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದರು. ಆರಂಭದಲ್ಲಿ ಸಹೋದರನ ಜತೆಗೂಡಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದರು. ಆದರೆ, ಅವರ ಆಸಕ್ತಿ ಸಿನಿಮಾ ಕಡೆಗೆ ಇತ್ತು.
ಡಾ.ರಾಜಕುಮಾರ್ ಸೇರಿ ಹಲವು ಗಣ್ಯರೊಂದಿಗೆ ನಟಿಸಿ ಅವರು ಸೈ ಎನಿಸಿಕೊಂಡಿದ್ದರು. ಕನ್ನಡ ಸಿನಿಮಾ ಜಗತ್ತಿನ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ಅವರು 1963ರಲ್ಲಿ ವೀರಸಂಕಲ್ಪ ಎಂಬ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದರು. ಅದರಲ್ಲೂ, 1966ರಲ್ಲಿ ಡಾ.ರಾಜಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾ ನಿರ್ಮಾಣ ಮಾಡಿದರು. ಅಲ್ಲಿಂದ ಡಾ.ರಾಜಕುಮಾರ್ ಅವರ ಜತೆ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು.
1985ರಲ್ಲಿ ಸಿನಿಮಾ ನಿರ್ದೇಶನಕ್ಕೆ ಕಾಲಿಟ್ಟ ದ್ವಾರಕೀಶ್ ಅವರು ಅಲ್ಲೂ ಯಶಸ್ವಿಯಾದರು. ಡಾ.ವಿಷ್ಣುವರ್ಧನ್ ಅಭಿನಯದ ನೀ ಬರೆದ ಕಾದಂಬರ್ ಸೂಪರ್ ಹಿಟ್ ಆಯಿತು. ಕಿಟ್ಟು-ಪುಟ್ಟು, ಸಿಂಗಾಪುರದಲ್ಲಿ ರಾಜಕುಳ್ಳ, ಭಾಗ್ಯವಂತರು, ಗುರು ಶಿಷ್ಯರು, ಪೆದ್ದ-ಗೆದ್ದ, ಆಪ್ತಮಿತ್ರ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ದ್ವಾರಕೀಶ್ ಅವರದ್ದಾಗಿದೆ. ಚೌಕ ಇವರ ಕೊನೆಯ ಸಿನಿಮಾ ಆಗಿದೆ. ʼದ್ವಾರಕೀಶ್ ಚಿತ್ರʼ ಇವರ ನಿರ್ಮಾಣವಾಗಿತ್ತು.