ಬೆಂಗಳೂರು/ ಬೆಳಗಾವಿ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ಗಾಣಿಗ ಸಮುದಾಯದ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಬಹುದಿನಗಳ ಬೇಡಿಕೆಯಾಗಿರುವ ಗಾಣಿಗ ಅಭಿವೃದ್ಧಿ ನಿಗಮವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಸೋಮವಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಗಾಣಿಗ ಸಮುದಾಯದ ಮುಖಂಡರು ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈ ಬಗ್ಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಇತರ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿನಂತಿಸಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ಗಾಣಿಗ ಅಭಿವೃದ್ಧಿ ನಿಗಮವನ್ನು ಅಸ್ತಿತ್ವಕ್ಕೆ ತರುವ ಮೂಲಕ ಸಮಾಜದ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದಾರೆ. ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕರ್ನಾಟಕದ ಪ್ರಮುಖ ಸಮುದಾಯವಾಗಿರುವ ಗಾಣಿಗ ಸಮಾಜಕ್ಕೆ ಬಿಜೆಪಿ ಸರಕಾರ ಕೊನೆಗೂ ಸಿಹಿ ಸುದ್ದಿ ರವಾನಿಸಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮಸಂಖ್ಯೆ 78(ಎ)ಯಿಂದ (ಇ)ವರೆಗೆ ಬರುವ ಗಾಣಿಗ, ತೇಲಿ, ಗಾಂಡ್ಲ, ವನಿಯನ್ ಹಾಗೂ ಜ್ಯೋತಿನಗರ, ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದೇಶಿಸಲಾಗಿದೆ.