ದೆಹಲಿ : ದೇಶದ ಸುಪ್ರೀಂ ಕೋರ್ಟ್ ನ ಮುಂದಿನ ಸಿಜೆಐ ಆಗಿ ನ್ಯಾಯಮೂರ್ತಿ ಸಂಜೀವ ಖನ್ನಾ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರ ಗುರುವಾರ ರಾತ್ರಿ ಅಧಿಸೂಚನೆ ಹೊರಡಿಸಿದೆ.
ಭಾರತದ ಸಂವಿಧಾನದಲ್ಲಿ ನೀಡಲಾಗಿರುವ ಅಧಿಕಾರದಂತೆ ಭಾರತದ ನ್ಯಾಯಮೂರ್ತಿ ಅವರ ಜೊತೆ ಸಮಾಲೋಚನೆ ನಡೆಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜೀವ ಖನ್ನಾ ಅವರನ್ನು ನವೆಂಬರ್ 11, 2024 ರಿಂದ ಜಾರಿಗೆ ಬರುವಂತೆ ಮುಖ್ಯ ನ್ಯಾಯಮೂರ್ತಿಯನ್ನಾಗಿ ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಅರ್ಜುನ್ ರಾಮ್ ಮೇಘವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೂತನ ಸಿಜೆಐ ಸಂಜೀವ ಖನ್ನಾ ಅವರು ನವೆಂಬರ್ 11 ರಂದು ದೇಶದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷದ ಮೇ 13 ವರೆಗೆ ಅವರ ಅಧಿಕಾರ ಅವಧಿ ಇರಲಿದೆ. 2019ರ ಜನವರಿ 18ರಂದು ಅವರು ದೆಹಲಿ ಹೈಕೋರ್ಟ್ ನಿಂದ ಸುಪ್ರೀಂಕೋರ್ಟಿಗೆ ಪದೋನ್ನತಿ ಪಡೆದುಕೊಂಡಿದ್ದರು. ಅವರು 1973 ರ ಐತಿಹಾಸಿಕ ಕೇಶವಾನಂದ ಭಾರತಿ ತೀರ್ಪು ನೀಡಿದ್ದ ನ್ಯಾಯಮೂರ್ತಿ ಎಚ್. ಆರ್. ಖನ್ನಾ ಅವರ ಸೋದರಳಿ.
ಸಂಜೀವ ಖನ್ನಾ ಅವರು ಈಗಾಗಲೇ ಹಲವು ಮಹತ್ತರ ತೀರ್ಪು ನೀಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಹಾಲಿ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ತಮ್ಮ
ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸಂಜೀವ ಖನ್ನಾ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಸಿಜೆಐ ನವೆಂಬರ್ 11 ರಂದು ಅಧಿಕಾರವನ್ನು ತ್ಯಜಿಸುವುದರಿಂದ ತಮ್ಮ ಉತ್ತರಾಧಿಕಾರಿಯಾಗಬೇಕು ಎಂದು ಹೇಳಿದ್ದರು. ಗಮನಾರ್ಹವೆಂದರೆ, ನ್ಯಾಯಮೂರ್ತಿ ಖನ್ನಾ ಅವರು ಉನ್ನತ ನ್ಯಾಯಾಲಯದ 2 ನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಅವರು 1983 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ಸೇರಿಕೊಂಡಿದ್ದರು.