ಬೆಳಗಾವಿ: ಸೆಪ್ಟೆಂಬರ್ ಮೂರರ ಮಂಗಳವಾರ ನಡೆಯಬೇಕಾಗಿದ್ದ ಕಿತ್ತೂರು ಪಟ್ಟಣ ಪಂಚಾಯಿತಿ ಚುನಾವಣೆಗೆ ಧಾರವಾಡ ಹೈಕೋರ್ಟ್ ಇದೀಗ ತಡೆ ನೀಡಿದೆ.
ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಅಪಹರಿಸಲಾಗಿತ್ತು. ಚುನಾವಣೆ ಮುಂದೂಡುವಂತೆ ಒತ್ತಾಯಿಸಿ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಕೊನೆಗೂ ನ್ಯಾಯಾಲಯ ಚುನಾವಣೆ ಮುಂದೂಡಿದೆ.
ಚುನಾವಣೆ ಮುಂದೂಡುವಂತೆ ಒತ್ತಾಯಿಸಿ ಬಿಜೆಪಿ ಕಳೆದ ನಾಲ್ಕು ದಿನಗಳಿಂದ ನಿರಂತರ ಪ್ರತಿಭಟಸುತ್ತಿದೆ. ತಮ್ಮ ಸದಸ್ಯರನ್ನು ಹುಡುಕಿಕೊಂಡು ಬರಬೇಕು, ಅಲ್ಲಿಯವರೆಗೂ ಚುನಾವಣೆ ಮುಂದೂಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಚುನಾವಣೆಗೆ ತಡೆಯೊಡ್ಡಿ ಸೋಮವಾರ ಆದೇಶ ಹೊರಡಿಸಿದೆ.
ಅಪಹರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ರೆಸಾರ್ಟ್ ಬಳಿ ಸೋಮವಾರ ಅಪಹರಿಸಿಕೊಂಡು ಹೋಗಿದ್ದ ವಾಹನ ಪತ್ತೆಯಾಗಿದೆ.
ಬಿಜೆಪಿ ಪ್ರತಿಭಟನೆ : ಕಿತ್ತೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 9 ಸದಸ್ಯರನ್ನು ಹೊಂದಿದೆ. ಐವರು ಕಾಂಗ್ರೆಸ್ ಮತ್ತು ನಾಲ್ವರು ಪಕ್ಷೇತರರು ಸೇರಿ ಕಾಂಗ್ರೆಸ್ ಬಲ 9ಕ್ಕೆ ಏರಿದೆ. ಬಿಜೆಪಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ಸಿಗೆ ಶಾಸಕ ಬಾಬಾ ಸಾಹೇಬ್ ಪಾಟೀಲ ಅವರ ಮತ ಇವೆ. ಹೀಗಾಗಿ ಎರಡು ಪಕ್ಷಗಳು ತಲಾ 10 ಮತಗಳನ್ನು ಹೊಂದಿವೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಬಿಜೆಪಿ ಸದಸ್ಯರನ್ನು ಅಪಹರಣ ಮಾಡಿದರೆ ಗೆಲ್ಲಬಹುದು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ತಮ್ಮ ಸದಸ್ಯರನ್ನು ಅಪಹರಿಸಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದ ಬಿಜೆಪಿ ಪ್ರತಿಭಟನೆ ನಡೆಸಿ ನ್ಯಾಯಾಲಯದ ಮೊರೆ ಹೋಗಿದೆ. ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್ ಪಾಟೀಲ, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರ ತಂದೆ ಬಸವರಾಜ ಅವರು ಕೆಲಹೊತ್ತು ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.