ಬೆಂಗಳೂರು: ಕನ್ನಡಿಗರ ಕ್ರಿಕೆಟ್ ತಂಡ ಎಂದೇ ಜನಪ್ರಿಯತೆ ಗಳಿಸಿರುವ ಆರ್ಸಿಬಿಗೆ ನೂತನ ನಾಯಕನ ಘೋಷಣೆ ಮಾಡಲಾಗಿದೆ. ಮಧ್ಯಪ್ರದೇಶ ಮೂಲದ ಹೆಸರಾಂತ ಆಟಗಾರ, ಹಾಲಿ ಆರ್ಸಿಬಿ ಆಟಗಾರರು ಆಗಿರುವ ರಜತ್ ಪಾಟಿದಾರ್ ಅವರನ್ನು ನೂತನ ನಾಯಕರನ್ನಾಗಿ ಇಂದು ಘೋಷಣೆ ಮಾಡಲಾಗಿದೆ.
ಬಲಗೈ ಬ್ಯಾಟರ್ ರಜತ್ ಪಾಟೀದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಬಹುನಿರೀಕ್ಷಿತ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುಂಚಿತವಾಗಿ ಆರ್ಸಿಬಿ ಈ ಕುರಿತು ನಿರ್ಧಾರ ಪ್ರಕಟಿಸಿದೆ.
ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಕಪ್ತಾನಗಿರಿ ವಹಿಸಿಕೊಳ್ಳುವ ಕುರಿತು ವರದಿಗಳು ಬಂದಿದ್ದವು. ಆದರೆ ಕೊನೆಗೂ ರಜತ್ ಪಾಟೀದಾರ್ ಅವರಿಗೆ ನಾಯಕತ್ವ ವಹಿಸಿಕೊಡಲು ತಂಡದ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
2013ರಿಂದ 2021ರವರೆಗೆ ಆರ್ಸಿಬಿ ತಂಡವನ್ನು ಕೊಹ್ಲಿ ಮುನ್ನಡೆಸಿದ್ದರು. 2022ರಿಂದ 2024ರವರೆಗೆ ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿ ತಂಡದ ಸಾರಥ್ಯ ವಹಿಸಿದ್ದರು.
ಮತ್ತೊಂದೆಡೆ ಹರಾಜಿಗೆ ಮುಂಚಿತವಾಗಿ ಆರ್ಸಿಬಿ ರಿಟೇನ್ ಮಾಡಿಕೊಂಡ ಆಟಗಾರರಲ್ಲಿ 31 ವರ್ಷ ವಯಸ್ಸಿನ ಪಾಟೀದಾರ್ ಕೂಡ ಒಬ್ಬರಾಗಿದ್ದರು. ಈಗ ಐಪಿಎಲ್ನಲ್ಲಿ ಚೊಚ್ಚಲ ಕಿರೀಟ ಗೆಲ್ಲುವ ದೊಡ್ಡ ಸವಾಲು ಅವರ ಮುಂದಿದೆ.