ಸೇಡಂ/ ಬೆಂಗಳೂರು :
ನಂದಿನಿ ಹಾಲು ದರ ವಿಚಾರದಲ್ಲಿ ರಾಜ್ಯ ಸರಕಾರ ಇದೀಗ ಒಂದು ನಿರ್ಧಾರ ತೆಗೆದುಕೊಂಡಿದೆ. ಹಾಲಿನ ದರ 3 ₹ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದರ ಹೆಚ್ಚಳಕ್ಕೆ ಬ್ರೇಕ್ ಹಾಕಿದ್ದಾರೆ.
ನಂದಿನಿ ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20 ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ನಂದಿನಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯೆ ನೀಡಿ, ಕಳೆದ ಹಲವಾರು ತಿಂಗಳಿನಿಂದ ಈ ಬಗ್ಗೆ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಜನರಿಗೆ ಭಾರ ಆಗದಂತೆ, ರೈತರಿಗೆ ಅನುಕೂಲವಾಗುವಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು ಎಂದು ತಿಳಿಸಿದರು.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಮಾಹಿತಿ ಬಿಡುಗಡೆ ಮಾಡಿದ್ದು, ನಂದಿನಿಯ ಎಲ್ಲಾ ಮಾದರಿಯ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡಿರುವುದಾಗಿ ತಿಳಿಸಿತ್ತು ಹಾಗೂ ಸೋಮವಾರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ದರ 3 ರೂ. ಏರಿಕೆ ಮಾಡಲು ಕೆಎಂಎಫ್ ಮುಂದಾಗಿತ್ತು.ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವಿನ ಬೆಲೆ ಏರಿಕೆಯಾಗಿದೆ. ಜೊತೆಗೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಸಾಗಾಣಿಕೆ, ವಿದ್ಯುತ್, ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 – 35 ರಷ್ಟು ಹೆಚ್ಚಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲು ಕೆಎಂಎಫ್ ಮುಂದಾಗಿತ್ತು.