ಬೆಳಗಾವಿ: ನಮ್ಮ ಧರ್ಮ, ಭೂಮಿ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಎಲ್ಲರೂ ಒಂದಾಗಿ ಹೋರಾಡಬೇಕಿದೆ ಎಂದು ಗದುಗಿನ ಶಿವಾನಂದ ಬ್ರಹ್ಮಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ಮಹಾದ್ವಾರ ರಸ್ತೆಯ ಸಂಭಾಜಿ ಮಹಾರಾಜರ ಉದ್ಯಾನದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ರವಿವಾರ ಸಂಜೆ ಹಮ್ಮಿಕೊಂಡಿದ್ದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಹಿಂದುಗಳು ತಮ್ಮ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ. ಹಿಂದುಗಳ ವಿರುದ್ಧ ಕೆಲಸ ಮಾಡುವವರಿಂದ ಎಚ್ಚರದಿಂದ ಇರಬೇಕಿದೆ. ಹೋರಾಟದ ಮೂಲಕವೇ ದೇಶದಲ್ಲಿ ನಾವು ತಲೆ ಎತ್ತಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಕೊರೊನಾ ಸಂಕಷ್ಟ ಸಮಯದಲ್ಲಿ ಬಜರಂಗ ದಳದ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿ, ಸಂಕಷ್ಟದಲ್ಲಿ ಇದ್ದವರ ನೆರವಿಗೆ ಧಾವಿಸಿದರು. ಈಗ ಎಲ್ಲ ಕಾರ್ಯಕರ್ತರು ಭಾರತಾಂಬೆ ರಕ್ಷಣೆಗಾಗಿ ಸಂಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.
ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಹಿಂದೂ ಸಂಸ್ಕೃತಿಯ ವಿಶ್ವರೂಪದ ದರ್ಶನವಾಗುತ್ತಿದೆ. ಭಕ್ತರಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ಉತ್ತರ ಪ್ರದೇಶ ಸರ್ಕಾರಕ್ಕೆ ಕೃತಜ್ಞರಾಗಿದ್ದೇವೆ ಎಂದು ಹೇಳಿದರು.
ಬಜರಂಗ ದಳದ ರಾಷ್ಟ್ರೀಯ ಘಟಕದ ಸಂಯೋಜಕ ನೀರಜ್ ಡೊಣೆರಿಯಾ, ಧರ್ಮದ ಹೆಸರಿನಲ್ಲಿ ಮುಸ್ಲಿಮರಿಂದ ದೇಶದ ವಿಭಜನೆಯಾಗಿದೆ. ಇನ್ನೂ ಅದು ಮುಂದುವರಿದಿದೆ. ಲವ್ ಜಿಹಾದ್ ಹೆಸರಿನಲ್ಲಿ ಹಿಂದು ಸಮುದಾಯದ ಯುವತಿಯರನ್ನು ವಂಚಿಸುತ್ತಿದ್ದಾರೆ. ಹಿಂದುಗಳ ಜನಸಂಖ್ಯೆ ಕಡಿಮೆಗೊಳಿಸಿ, ಅವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದು ಪರಿಷತ್ ಪ್ರಾಂತ ಉಪಾಧ್ಯಕ್ಷ ಶ್ರೀಕಾಂತ ಕದಮ, ಕ್ಷೇತ್ರ ಸಮರಸತಾ ಪ್ರಮುಖ ಕೃಷ್ಣಭಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಪ್ರಮೋದಕುಮಾರ ಒಕ್ಕುಂದಮಠ, ಆನಂದ ಕರಲಿಂಗಣ್ಣವರ, ವೆಂಕಟೇಶ ಶಿಂಧೆ, ಪುಂಡಲಿಕ ದಳವಾಯಿ, ವೆಂಕಟೇಶ ದೇಶಪಾಂಡೆ, ವಿಠಲ ಮಾಳಿ ಇತರರಿದ್ದರು. ಇದಕ್ಕೂ ಮುನ್ನ, ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಿಂದ ಸಂಭಾಜಿ ಉದ್ಯಾನದವರೆಗೆ 2 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಶಿಸ್ತುಬದ್ಧವಾಗಿ ಹೆಜ್ಜೆಹಾಕಿದರು.