ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಎಂಇಎಸ್ ನಿಷೇಧಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಬೆಳಗಾವಿಯಲ್ಲಿ ನೀರಸ ಪ್ರತಿಕ್ರಿಯೆ ದೊರಕಿದೆ. ಬೆಳಗಾವಿಯಲ್ಲಿ ಬಸ್ ಸಂಚಾರ ಎಂದಿನಂತೆ ಇತ್ತು. ಆದರೆ, ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರಕ್ಕೆ ತೆರಳುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳು ಮತ್ತು ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುವ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುತ್ತಿರುವುದು ಕಂಡುಬಂತು. ವಾಹನ ಸಂಚಾರ, ಜನಜೀವನ, ವ್ಯಾಪಾರ-ವಹಿವಾಟು ಎಂದಿನಂತೆ ನಡೆದಿದೆ. ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಸಮೀಪ ಪ್ರತಿಭಟನೆ ನಡೆಸಿದರು.