ನವದೆಹಲಿ: ಜಾಗತಿಕ ಸವಾಲುಗಳು ಮತ್ತು ಅಮೆರಿಕದ ಸುಂಕದ ಸಮರದ ನಡುವೆಯೂ ಭಾರತದ ಆರ್ಥಿಕತೆಯು ಸದೃಢವಾಗಿ ಬೆಳೆಯುತ್ತಿದೆ. ಜನವರಿ 7 ರಂದು ಸರ್ಕಾರ ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜಿನ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಒಟ್ಟು ದೇಶೀಯ ಉತ್ಪನ್ನ ಶೇ. 7.4 ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಇದು ಕಳೆದ ವರ್ಷದ ಶೇ. 6.5 ಕ್ಕಿಂತ ಅಧಿಕವಾಗಿದೆ.
ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಹೇಳಿಕೆಯ ಪ್ರಕಾರ 2025-26ರಲ್ಲಿ ಜಿಡಿಪಿಯು 201.90 ಲಕ್ಷ ಕೋಟಿ ರೂ. ತಲುಪುವ ಅಂದಾಜಿದೆ (2024-25ರಲ್ಲಿ ಇದು 187.97 ಲಕ್ಷ ಕೋಟಿ ರೂ. ಇತ್ತು).
ನಾಮಮಾತ್ರದ ಜಿಡಿಪಿ ಅಥವಾ ಪ್ರಸಕ್ತ ಬೆಲೆಗಳಲ್ಲಿ ಜಿಡಿಪಿ ಮೌಲ್ಯವು 357.14 ಲಕ್ಷ ಕೋಟಿ ರೂ. ತಲುಪಲಿದ್ದು, ಶೇ. 8.0 ರಷ್ಟು ಬೆಳವಣಿಗೆಯನ್ನು ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ.
ಬೆಳವಣಿಗೆಗೆ ಪ್ರೇರಕ ಅಂಶಗಳು:
ದೇಶದ ಆರ್ಥಿಕ ಪ್ರಗತಿಗೆ ಕೆಲವು ಸುಧಾರಣೆಗಳು ವೇಗವರ್ಧಕವಾಗಿ ಕೆಲಸ ಮಾಡಲಿವೆ ಎಂದು ವರದಿ ತಿಳಿಸಿದೆ.
2025-26ರ ಬಜೆಟ್ನಲ್ಲಿ ಘೋಷಿಸಲಾದ ವ್ಯೂಹಾತ್ಮಕ ಆದಾಯ ತೆರಿಗೆ ಕಡಿತ
ಜಿಎಸ್ಟಿ ವ್ಯವಸ್ಥೆಯ ತರ್ಕಬದ್ಧಗೊಳಿಸುವಿಕೆ
ಓಮನ್, ಯುಕೆ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಪ್ರಮುಖ ವ್ಯಾಪಾರ ಒಪ್ಪಂದಗಳು ಎಂದು ಜಿಡಿಪಿ ಬೆಳವಣಿಗೆಗೆ ಪ್ರೇರಕ ಅಂಶಗಳು ಎಂದು ವರದಿ ತಿಳಿಸಿದೆ.
ವಲಯವಾರು ಪ್ರಗತಿ:
ಉತ್ಪಾದನೆ ಮತ್ತು ನಿರ್ಮಾಣ ವಲಯಗಳು ಶೇ. 7 ರಷ್ಟು ಪ್ರಗತಿ ಸಾಧಿಸುವ ಅಂದಾಜಿದೆ.
ಸೇವಾ ವಲಯವು ಆರ್ಥಿಕತೆಯ ಪ್ರಮುಖ ಚಾಲಕಶಕ್ತಿಯಾಗಿದ್ದು, ಒಟ್ಟು ಮೌಲ್ಯವರ್ಧನೆ ಶೇ. 7.3 ರಷ್ಟು ದಾಖಲಾಗುವ ನಿರೀಕ್ಷೆಯಿದೆ.
ಕೃಷಿ, ಅನಿಲ ಮತ್ತು ನೀರು ಸರಬರಾಜಿನಂತಹ ಉಪಯುಕ್ತ ಸೇವಾ ವಲಯಗಳಲ್ಲಿ ಈ ಬಾರಿ ಸಾಧಾರಣ ಮಟ್ಟದ ಬೆಳವಣಿಗೆ ಕಂಡುಬಂದಿದೆ.
ಈ ಮುಂಗಡ ಅಂದಾಜುಗಳನ್ನು ಫೆಬ್ರವರಿ 1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಸಿದ್ಧಪಡಿಸಲು ಆಧಾರವಾಗಿ ಬಳಸಲಾಗುತ್ತದೆ. ಭಾರತದ ಆರ್ಥಿಕತೆಯು 2023-24ರಲ್ಲಿ ಶೇ. 8.2 ರಷ್ಟು ಮತ್ತು 2024-25ರಲ್ಲಿ ಶೇ. 6.5 ರಷ್ಟು ಬೆಳವಣಿಗೆ ಕಂಡಿತ್ತು.


