ಕಳೆದ ವರ್ಷ ಕರ್ನಾಟಕ ವಿಧಾನ ಮಂಡಲ ವಿಶೇಷ ಅಧಿವೇಶನ ಬೆಳಗಾವಿಯಲ್ಲಿ ಆಯೋಜನೆಗೊಂಡ ಸಂದರ್ಭದಲ್ಲಿ ಎಂಇಎಸ್ ಕೃಪಾಪೋಷಿತ ಶಕ್ತಿಗಳು ಬೆಳಗಾವಿಯಲ್ಲಿ ರಾತ್ರಿ ಹೊತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ನಡೆಸಿದ್ದರು. ಕರ್ನಾಟಕ ಸರಕಾರವೇ ಬೆಳಗಾವಿಯಲ್ಲಿದ್ದಾಗ ನಡೆದ ಗಲಭೆಗೆ ನಾಡಿನೆಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೇ ಪ್ರಮುಖ ಆಧಾರವಾಗಿರಿಸಿಕೊಂಡ ಕರ್ನಾಟಕ ಪೊಲೀಸ್ ಈ ಬಾರಿ ಯಾವುದೇ ಗಲಭೆಗಳಿಗೆ ಆಸ್ಪದ ನೀಡಿದೇ ಕಾನೂನು ವ್ಯವಸ್ಥೆ ಕಾಪಾಡಿಕೊಂಡಿತು. ಎಂಇಎಸ್ ಕಳೆದ ವರ್ಷ ಅಧಿವೇಶನಕ್ಕೆ ಬಂದ ವಾಹನಗಳ ಮೇಲೆ ಕಲ್ಲು ತೂರಿ ಗಾಜು ಒಡೆದು ನಡೆಸಿದ ದಾಂದಲೆಯನ್ನು ಪ್ರಮುಖ ಕಾರಣವಾಗಿಸಿಕೊಂಡು ಪೊಲೀಸರು ಈ ಬಾರಿ ಮಹಾಮೇಳಾವ ನಡೆಸಲು ಅವಕಾಶ ನಿರಾಕರಿಸಿದರು.
ಬೆಳಗಾವಿ :
ಕರ್ನಾಟಕ ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಎಂಇಎಸ್ ಪ್ರತಿ ವರ್ಷ ಮಹಾಮೇಳಾವ ಏರ್ಪಡು ಮಾಡುತ್ತಾ ಬಂದಿದೆ. ಆದರೆ, ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಮೇಳಾವಕ್ಕೆ ಕಡಿವಾಣ ಹಾಕುವ ಮೂಲಕ ಎಂಇಎಸ್ ಗೆ ತಕ್ಕ ತಿರುಗೇಟು ನೀಡಿದೆ. ಸೋಮವಾರದಿಂದ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಿದೆ. ಆದರೆ, ಇದಕ್ಕೆ ಪ್ರತಿಯಾಗಿ ಎಂಇಎಸ್ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಮಹಾಮೇಳಾವದ ಹೆಸರಿನಲ್ಲಿ ಮರಾಠಿಗರನ್ನು ಪ್ರತಿ ವರ್ಷವೂ ಪ್ರಚೋದಿಸುವ ಕೆಲಸ ಮಾಡುತ್ತಿದೆ. ಕನ್ನಡ ಸಂಘಟನೆಗಳ ತೀವ್ರ ವಿರೋಧಕ್ಕೆ ಮಣಿದ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಈ ವರ್ಷ ಯಾವುದೇ ಮುಲಾಜಿಲ್ಲದೆ
ಮಹಾಮೇಳಾವಕ್ಕೆ ಲಗಾಮು ಹಾಕಿದೆ. ಎಂಇಎಸ್ ನಾಯಕ ಹಾಗೂ ಮಾಜಿ ಶಾಸಕ ಮನೋಹರ ಕಿಣೇಕರ, ಯುವ ಧುರೀಣ ಶುಭಂ ಶೆಳಕೆ ಅವರಿಗೆ ಪ್ರಚೋದನೆಯ ಈ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ವಾರ್ನಿಂಗ್ ನೀಡಿದರು.
ವ್ಯಾಕ್ಸಿನ್ ಡಿಪೋದಲ್ಲಿ ಹಾಕಿದ್ದ ಮೇಳಾವ್ ವೇದಿಕೆಯ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡರು.
ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಬೆಳಗಾವಿ ನಗರ ಡಿಸಿಪಿ ರವೀಂದ್ರ ಗಡಾದಿ ಅವರು ಸ್ಥಳಕ್ಕೆ ಭೇಟಿ ನೀಡಿ ವೇದಿಕೆಯ ಪೆಂಡಾಲ್ ಹಾಗೂ ಇದರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದರು. ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಇದಕ್ಕೂ ಮುಂಚಿತವಾಗಿ ಮಹಾಮೇಳಾವ ನಡೆಸುವ ಸ್ಥಳ ಸೇರಿದಂತೆ ಬೆಳಗಾವಿ ನಗರದಲ್ಲಿ ಕಲಂ 144 ಅನ್ನು ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.