ಬೆಳಗಾವಿ :
ಎಲ್ಲ ದಾನಗಳಲ್ಲಿ ರಕ್ತದಾನ ಅತ್ಯಮೂಲ್ಯವಾದುದು. ಇದರಿಂದ ದೈಹಿಕ ಆರೋಗ್ಯವು ಉತ್ತಮವಾಗುವದಲ್ಲದೇ ತನ್ನಿಂದ ಇನ್ನೊಬ್ಬರಿಗೆ ಜೀವದಾನವಾಯಿತು ಎಂಬ ಆತ್ಮ ಸಂತೋಷವನ್ನು ಹೊಂದಬಹುದಾಗಿದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರಕ್ತಭಂಡಾರದ ಅಧಿಕಾರಿ ಡಾ. ಅಶೋಕ ಅಲತಗಿ ಹೇಳಿದರು.
ನಗರದ ಉದ್ಯಮಬಾಗ ಅಶೋಕ ಐರನ್ ನ ಪ್ಲಾಂಟ 3 ರಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. 18 ವರ್ಷ ವಯಸ್ಕರು, 50 ಕಿಲೊಗ್ರಾಂ ಗಿಂತ ಅಧಿಕ ತೂಕ ಹೊಂದಿರುವ ಎಲ್ಲ ಆರೋಗ್ಯವಂತರೂ ರಕ್ತದಾನವನ್ನು ಮಾಡಬಹುದಾಗಿದೆ. ಇದರಿಂದ ಹೃದಯಕ್ಕೆ ಸಂಬಂದಿಸಿದಂತೆ ರೋಗಗಳು, ರಕ್ತದೊತ್ತಡದ ಸಮಸ್ಯೆಗಳು, ನರಮಂಡಲಕ್ಕೆ ಸಂಬಂದಿಸಿದ ಕಾಯಿಲೆಗಳಿಂದ ದೂರವಿರಬಹುದಾಗಿದೆ ಎಂದು ತಿಳಿವಳಿಕೆ ನೀಡಿದರು.
ಶಿಬಿರದಲ್ಲಿ ಅಶೋಕ ಐರನ್ ನ ಪ್ಲಾಂಟ 3 ರ 40 ಕ್ಕೂ ಅಧಿಕ ಕಾರ್ಮಿಕ ಬಂಧುಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ 25 ಕ್ಕೂ ಅಧಿಕ ಜನ ರಕ್ತದಾನ ಮಾಡಿದರು. ಶಿಬಿರದಲ್ಲಿ ಅಶೋಕ ಐರನ್ ನ ಪ್ಲಾಂಟ 3 ರ ವೈದ್ಯಾಧಿಕಾರಿ ಡಾ. ಮಹೇಶ ಸತ್ತಿಗೇರಿ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಮೋಹನ ಮತ್ತು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಜನಸಂಪರ್ಕಾಧಿಕಾರಿ ವಿಜಯಕುಮಾರ, ರಕ್ತ ಭಂಡಾರದ ತಂತ್ರಜ್ಞ ಮಹಾದೇವ ಹಾಗೂ ಇನ್ನಿತರೆ ತಂತ್ರಜ್ಞರು ಶಿಬಿರದಲ್ಲಿ ಭಾಗವಹಿಸಿದ್ದರು.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್. ಸಿ. ಧಾರವಾಡ ಮಾತನಾಡಿ, ಶಕ್ತರಾಗಿದ್ದಾಗಲೇ ರಕ್ತದಾನ ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತವೂ ಹುಟ್ಟಿಕೊಂಡು ಶರೀರದಲ್ಲಿ ನವೋಲ್ಲಾಸವನ್ನು ಅನುಭವಿಸುವಂತೆ ಮಾಡುತ್ತದೆ. ಆದ್ದರಿಂದ ಆಸಕ್ತರೆಲ್ಲರೂ ರಕ್ತದಾನಕ್ಕೆ ಮುಂದಾಗಬೇಕು ಎಂದು ಹೇಳಿದರು.