ಬೆಳಗಾವಿ : ಜಿಲ್ಲೆಯಲ್ಲಿ ಇದೀಗ ನಕಲಿ ಪತ್ರಕರ್ತರ ಹಾವಳಿ ಮೇರೆ ಮೀರಿದೆ. ಬರೋಬ್ಬರಿ ಇಪ್ಪತ್ತೈದು ಸಾವಿರ ರೂಪಾಯಿ ನೀಡಲೇಬೇಕು ಎಂದು ನಕಲಿ ಪತ್ರಕರ್ತನೊಬ್ಬ ಅಧಿಕಾರಿ ಮೇಲೆ ಸವಾರಿ ಮಾಡಿದ್ದಾನೆ. ಈ ಬೇಡಿಕೆಯನ್ನು ನಯವಾಗಿಯೇ ತಿರಸ್ಕರಿಸಿದ ಅಧಿಕಾರಿ ತಾನೇನು ತಪ್ಪು ಮಾಡಿಲ್ಲ ಎಂದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ಏನು ?
ವಾರದ ಹಿಂದೆ ನಡೆದ ಘಟನೆ ಇದು. ನಕಲಿ ಪತ್ರಕರ್ತನೊಬ್ಬ ಹೇಗೆ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾನೆ ಗೊತ್ತೇ ? ಕರ್ತವ್ಯದ ಮೇಲಿದ್ದ ಅಧಿಕಾರಿಯೊಬ್ಬರು ರಾತ್ರಿ 2.30 ಕ್ಕೆ ಆರೋಗ್ಯ ಚೆನ್ನಾಗಿರದ ಕಾರಣ ವಿಶ್ರಾಂತಿ ಮಾಡುತ್ತಿರುವಾಗ ವಿಡಿಯೋ ಮಾಡಿಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೆ ಇದಕ್ಕಾಗಿ ಬರೋಬ್ಬರಿ 25,000 ಹಣಕ್ಕೆ ಬೇಡಿಕೆ ಇಟ್ಟಿರುತ್ತಾನೆ. ಆದರೆ ಅವನ ಬ್ಲ್ಯಾಕ್ ಮೇಲ್ ಗೆ ಮಣಿಯದ ಅಧಿಕಾರಿ ಹಣ ನೀಡಲಾರೆ ಎಂದಿರುವುದು ಇದೀಗ ವೈರಲ್ ಆಗಿದೆ. ಅಧಿಕಾರಿ ಸಹ ಬ್ಲಾಕ್ ಮೇಲ್ ಪತ್ರಕರ್ತನ ಸಮಗ್ರ ವಿವರ ಕೇಳಿದ್ದಾನೆ. ನಿಮ್ಮ ಐಡಿಯನ್ನು ಇಂದೇ ನೋಡಿದ್ದೇವೆ ಎಂದು ಹೇಳಿದ್ದಾರೆ. ಅದಕ್ಕೆ ನಕಲಿ ಪತ್ರಕರ್ತ ಮತ್ತು ಅವನ ಜೊತೆಗೆ ಇರುವ ಮಹಿಳಾಮಣಿ ಪತ್ರಕರ್ತೆ ತಮ್ಮ ಯೂಟ್ಯೂಬ್ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದು ವಾರ್ತಾ ಇಲಾಖೆಯಲ್ಲಿ ಈ ಬಗ್ಗೆ ವಿಚಾರಿಸಿ ಎಂದಿರುವುದು ಇದರಲ್ಲಿದೆ.
ಸತ್ಯಸತ್ಯಾತೆಗೆ ಮುಂದಾಗಲಿ :
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ನಕಲಿ ಪತ್ರಕರ್ತರ ಚಟುವಟಿಕೆ ಮೇಲೆ ಹದ್ದಿನ ಕಣ್ಣು ಇಡಬೇಕು. ಅಧಿಕಾರಿಗಳು ಹಾಗೂ ಜನಸಾಮಾನ್ಯರನ್ನು ಸುಲಿಯುವ ಇಂತಹ ನಕಲಿ ಪತ್ರಕರ್ತರನ್ನು ಜೈಲಿಗೆ ಅಟ್ಟಬೇಕು ಎನ್ನುವುದು ಜನಸಾಮಾನ್ಯರ ಒತ್ತಾಯವಾಗಿದೆ.