ತಾರಿಹಾಳದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ ಕಾರ್ಯಕರ್ತರ ಸಮಾವೇಶ
ಬೆಳಗಾವಿ :
70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದ ಸಂಸ್ಥೆಗಳನ್ನು ಮಾರುವುದು ಬಿಟ್ಟರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಒಂದೇ ಒಂದು ಸಾಧನೆ ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ವ್ಯಂಗ್ಯವಾಡಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎರಡು ಚುನಾವಣೆ ಕಳೆದರೂ ಮೋದಿಯವರು ಭರವಸೆ ನೀಡಿದ ಬುಲೆಟ್ ಟ್ರೈನ್ ಇನ್ನೂ ಅಹ್ಮದಾಬಾದ್ ರೈಲ್ವೆ ಸ್ಟೆಷನ್ ನಲ್ಲಿ ನಿಂತಿದೆ, ಅದಕ್ಕೆ ಈವರೆಗೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಅನ್ನಿಸುತ್ತದೆ. ಮೋದಿಯವರು ಹೇಳಿದ ಇಂತಹ ಒಂದೊಂದು ಸುಳ್ಳುಗಳು ಇಂದು ಜನರ ಮುಂದೆ ಬಯಲಾಗುತ್ತಿವೆ ಎಂದು ಹೇಳಿದರು.
ಬಿಜೆಪಿಯವರು ಕಳೆದ ಎಂಟು ವರ್ಷದಲ್ಲಿ ಯಾವುದೇ ಒಂದು ಶಿಕ್ಷಣ ಸಂಸ್ಥೆ ಕಟ್ಟಿದ ಉದಾಹರಣೆ ಕೂಡ ಇಲ್ಲ. ಚುನಾವಣೆ ಬಂದಾಗ ಜನರಿಗೆ ಪಾಕಿಸ್ತಾನ ತೋರಿಸಿ ಜನರನ್ನು ಮರಳು ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಪಾಕಿಸ್ತಾನವನ್ನು ಹದ್ದು ಬಸ್ತಿನಲ್ಲಿ ಇಡುವುದು ಹೇಗೆ ಎಂದು ನಮ್ಮ ಹೆಮ್ಮೆಯ ಭಾರತೀಯ ಸೈನ್ಯದ 11 ಲಕ್ಷ ಸೈನಿಕರಿಗೆ ಗೊತ್ತಿದೆ. ಬಿಜೆಪಿಯವರಿಗೆ ಪಾಕಿಸ್ತಾನ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದಲ್ಲಿ ಈ ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ, ಹಣದುಬ್ಬರ, ರೈತರ, ಶಿಕ್ಷಣ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಅವರು ಯೋಚಿಸಬೇಕಾಗಿದೆ. ಅಧಿಕಾರ ಎಷ್ಟೂ ಮುಖ್ಯವೋ ಅಷ್ಟೇ ಮುಖ್ಯ ಈ ದೇಶ. ಹೀಗಾಗಿ ಕಾಂಗ್ರೆಸ್ ಪಕ್ಷ ಈ ದೇಶದ ಉಳಿವಿಗಾಗಿ ಅಧಿಕಾರಕ್ಕೆ ಬರಲೆಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, ದೇಶದುದ್ದಕ್ಕೂ ಬಿಜೆಪಿ ಸರ್ಕಾರ ದೌರ್ಜನ್ಯ ಮೇಲೆ ದೌರ್ಜನ್ಯ ಮಾಡುತ್ತಿದೆ. ಇದರಿಂದ ದಲಿತರು, ಹಿಂದುಳಿದ ವರ್ಗದವರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದಲ್ಲಿ ಎಸ್ಸಿ , ಎಸ್ಟಿ ಜನರ ಮೇಲೆ ಶೇಕಡ 26ರಷ್ಟು ದೌರ್ಜನ್ಯ ಹೆಚ್ಚಾಗಿದೆ ಎಂದರು.
ನಾವೆಲ್ಲರೂ ಕೆಲಸ ಮಾಡುತ್ತಿರೋದು ಯಾರೋ ಒಬ್ಬರನ್ನ ಶಾಸಕರು ಮಾಡಲು ಮುಖ್ಯಮಂತ್ರಿ ಮಾಡಲು ಅಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಐದೂವರೆ ಸಾವಿರ ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ತಯಾರಿ ನಡೆಸಿದೆ. 75 ಸಾವಿರ ಸರ್ಕಾರಿ ಶಾಲೆಗಳು ಬಿದ್ದು ಹೋಗುವ ಸ್ಥಿತಿ ತಲುಪಿವೆ. ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆ ನಡೆಸಲು ತಯಾರಿ ನಡೆಸಿದ್ದಾರೆ. ಇವತ್ತು ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆ ಖಾಲಿ ಇವೆ. ದಲಿತರು, ಹಿಂದುಳಿದ ವರ್ಗದವರಿಗೆ ಅಲ್ಲಿ ನೌಕರಿ ಸಿಗುತ್ತೆ, ಆದರೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ವಕ್ತಾರ ನಿಕೇತ ರಾಜ ಮೌರ್ಯ, ಪಕ್ಷದ ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.