ಯಮಕನಮರಡಿ :
ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ. ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರೈತರ, ಮಹಿಳೆಯರ ರಕ್ಷಣೆ ಸೇರಿದಂತೆ ಸರ್ವ ಜನಾಂಗದ ಐಕ್ಯತೆ ಹಾಗೂ ಬಡವರ ಏಳಿಗೆ ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಕಡೋಲಿ, ಅಲತಗಾ, ಚಲವಿನಟ್ಟಿ ಗ್ರಾಮದಲ್ಲಿ ಕಾರ್ಯಕರ್ತರ ಮನೆ ಮನೆಗೆ ಭೇಟಿ ನೀಡಿ, ಮತಯಾಚಿಸಿ ಮಾತನಾಡಿದ ಅವರು, ಕಳೆದ 15 ವರ್ಷದಲ್ಲಿ ಯಮಕನಮರಡಿ ಕ್ಷೇತ್ರದಾದ್ಯಂತ ಜನರು ಮೆಚ್ಚುವಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಧಿಕಾರವನ್ನು ಸೇವೆ ಎಂದು ಭಾವಿಸಿ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಕೇವಲ ಪ್ರಚಾರ ಮತ್ತು ಮಾತುಗಳಿಗೆ ಸೀಮಿತವಾಗದೆ ಎಲ್ಲರ ಕಣ್ಣಿಗೆ ಕಾಣುವ ಹಾಗೆ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ. ಇದನ್ನು ಗುರುತಿಸಿ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಬೆಂಬಲ ನೀಡಬೇಕು ಮನವಿ ಮಾಡಿದರು.
ನಾವು 2023ರಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಿಜೆಪಿ ಎಷ್ಟೇ ಸುಳ್ಳು ಹೇಳಲಿ, ಹಣದ ಹೊಳೆ ಹರಿಸಲಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯವರು ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಸತ್ಯ ಹೇಳುವುದನ್ನು ಕಲಿಯಲಿ, ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ನುಡಿದಂತೆ ನಡೆದಿದ್ದೇವೆ. 2013ರಲ್ಲಿ ನಮ್ಮ ಪ್ರಣಾಳಿಕೆ ಮೂಲಕ 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಅದರ ಜತೆಗೆ ಪ್ರಣಾಳಿಕೆಯಲ್ಲಿ ಹೇಳದ 30 ಕಾರ್ಯಕ್ರಮ ಕೊಟ್ಟಿದ್ದೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ನಾವು ಕೊಟ್ಟ ಮಾತಿಗೆ ತಪ್ಪಲ್ಲ ಎಂದು ತಿಳಿಸಿದರು.
ಜನರಿಗೆ ಬಿಜೆಪಿ ಸರಕಾರ ಗೆಲ್ಲುವುದಕ್ಕಿಂತ ಮುಂಚೆ ನೀಡಿದ ಭರವಸೆಗಳಾದ ರೈತರ ಆದಾಯ ದ್ವಿಗುಣ, ನಿರುದ್ಯೋಗದ ನಿವಾರಣೆ, ಉದ್ಯೋಗ ಭರವಸೆ, ಮಹಿಳಾ ಸಂರಕ್ಷಣೆ, ಉಚಿತ ಶಿಕ್ಷಣ ಎಲ್ಲಿದೆ ಎಂದು ಇದೇ ವೇಳೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ, ಕಡೋಲಿ,ಅಲತಗಾ, ಚಲವಿನಟ್ಟಿ ಗ್ರಾಮದ ಹಿರಿಯರು, ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಇದ್ದರು.