ಬೆಳಗಾವಿ ಜಿಲ್ಲೆಯ ಬಿಜೆಪಿ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದ ರಾಮದುರ್ಗ ವಿಧಾನಸಭಾ ಕ್ಷೇತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೈತಪ್ಪಿತ್ತು. ಮಹಾದೇವಪ್ಪ ಯಾದವಾಡ ಅವರಿಗೆ ಟಿಕೆಟ್ ನೀಡುವ ಬದಲು ಚಿಕ್ಕ ರೇವಣ್ಣ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಉಭಯ ಬಣಗಳ ನಡುವೆ ಪೈಪೋಟಿ ನಡೆದು ಕೊನೆಗೂ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಶೋಕ ಪಟ್ಟಣ ಗೆಲುವು ಸಾಧಿಸುವ ಮೂಲಕ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗಿತ್ತು. ಚುನಾವಣೆ ನಂತರ ಮಹದೇವಪ್ಪ ಯಾದವಾಡ ಬಿಜೆಪಿಯಿಂದ ವಿಮುಖರಾಗಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ಗೆ ಸೆಳೆಯಲು ಭಾರೀ ಪ್ರಯತ್ನ ನಡೆದಿದ್ದವು. ಕೊನೆಗೂ ಮಧ್ಯಪ್ರವೇಶ ಮಾಡಿದ ಜಗದೀಶ ಶೆಟ್ಟರ್ ಅವರು ಒಂದು ಕಾಲದಲ್ಲಿ ಸುರೇಶ ಅಂಗಡಿ ಅವರ ಅತ್ಯಪ್ತರಾಗಿ ಗುರುತಿಸಿಕೊಂಡಿದ್ದ ಮಹಾದೇವಪ್ಪ ಯಾದವಾಡ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಬಿಜೆಪಿಯ ಇದೊಂದು ಬಣವಾಗಿರುವ ಚಿಕ್ಕ ರೇವಣ್ಣ ಗುಂಪನ್ನು ಸಿಟ್ಟಿಗೆಬ್ಬಿಸಿದೆ. ಇದೀಗ ಜಗದೀಶ್ ಶೆಟ್ಟರ್ ಅವರು ಮಹದೇವಪ್ಪ ಯಾದವಾಡ ಮತ್ತು ಚಿಕ್ಕ ರೇವಣ್ಣ ಅವರ ಬಣಗಳ ಬೆಂಬಲ ಪಡೆದು ಚುನಾವಣೆ ಎದುರಿಸುವ ಸವಾಲು ಸೃಷ್ಟಿಯಾಗಿದೆ. ಶೆಟ್ಟರ್ ಈಗ ಉಭಯ ನಾಯಕರ ಬೆಂಬಲ ಯಾವ ರೀತಿ ಪಡೆಯುತ್ತಾರೆ ಕಾದುನೋಡಬೇಕಿದೆ.
ಬೆಳಗಾವಿ : ಬೆಳಗಾವಿ ಲೋಕಸಭಾ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೆ ರಾಮದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಇದೀಗ ಬಿಗ್ ಶಾಕ್ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಿಕ್ಕರೇವಣ್ಣ ಅವರ ಅಭಿಮಾನಿಗಳು ಇದೀಗ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಗದೀಶ ಶೆಟ್ಟರ್ ಶುಕ್ರವಾರ ರಾಮದುರ್ಗದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಭೇಟಿಯಾಗಿ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿದ್ದರು. ಈ ಬೆಳವಣಿಗೆ ಇದೀಗ ಚಿಕ್ಕರೇವಣ್ಣ ಅವರ ಬೆಂಬಲಿಗರನ್ನು ಕೆಂಡಾಮಂಡಲರನ್ನಾಗಿ ಮಾಡಿದೆ. ಶೆಟ್ಟರ್ ಧೋರಣೆ ವಿರುದ್ಧ ಹರಿಹಾಯ್ದಿರುವ ಚಿಕ್ಕ ರೇವಣ್ಣ ಅವರ ಬೆಂಬಲಿಗರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಾಯಕ ಚಿಕ್ಕ ರೇವಣ್ಣ ಅವರು ರಾಮದುರ್ಗದಲ್ಲಿ ಗೆಲ್ಲುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದ್ದವು. ಆದರೆ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಗೆಲುವಿನ ವಿರುದ್ಧ ಕೆಲಸ ಮಾಡಿರುವ ಮಹಾದೇವಪ್ಪ ಯಾದವಾಡ ಅವರನ್ನು ಓಲೈಸುವ ಕಾರ್ಯ ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರ ವಿರುದ್ಧ ಬುಸುಗುಡುತ್ತಿದ್ದ ಮಹಾದೇವಪ್ಪ ಯಾದವಾಡ ಅವರು ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಕಟ್ಟಾ ಕಾರ್ಯಕರ್ತರಾಗಿದ್ದ ಜಗದೀಶ ಶೆಟ್ಟರ್, ಅನಿಲ್ ಬೆನಕೆ ಹಾಗೂ ನನಗೆ ಬಿಜೆಪಿ ಟಿಕೆಟ್ ಕೊಟ್ಟಿರಲಿಲ್ಲ, ಇದರಿಂದ ಪಕ್ಷಕ್ಕೆ ಬಹುದೊಡ್ಡ ಹಾನಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಜಗದೀಶ ಶೆಟ್ಟರ್ ಉಭಯ ಸಂಕಟಕ್ಕೆ ಸಿಲುಕಿದ್ದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಮದುರ್ಗದಲ್ಲಿ ಚಿಕ್ಕ ರೇವಣ್ಣ ಮತ್ತು ಮಹಾದೇವಪ್ಪ ಯಾದವಾಡ ಅವರ ಬಣಗಳನ್ನು ಒಂದೇ ವೇದಿಕೆಯಡಿ ತಂದು ಚುನಾವಣೆ ಎದುರಿಸಬೇಕಾದ ಸಂಕಷ್ಟ ಎದುರಿಸುವಂತಾಗಿದೆ. ಇಲ್ಲವಾದಲ್ಲಿ ಈ ಹಿಂದೆ ಬಹುದೊಡ್ಡ ಅಂತರದಲ್ಲಿ ಲೀಡ್ ತಂದುಕೊಡುತ್ತಿದ್ದ ರಾಮದುರ್ಗದಲ್ಲಿ ಈ ಬಾರಿ ಬಿಜೆಪಿಗೆ ಎಲ್ಲಾ ರೀತಿಯ ತೊಂದರೆ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಜಗದೀಶ ಶೆಟ್ಟರ್ ಈ ಸಮಸ್ಯೆಯನ್ನು ಯಾವ ರೀತಿ ತಾರ್ಕಿಕವಾಗಿ ಪರಿಹರಿಸುತ್ತಾರೆ ಕಾದು ನೋಡಬೇಕಾಗಿದೆ.