ನವದೆಹಲಿ: 27 ವರ್ಷಗಳ ವನವಾಸದ ನಂತರ, ಬಿಜೆಪಿ ಭರ್ಜರಿ ಜಯ ಗಳಿಸುವ ಮೂಲಕ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ಒಂದು ದಶಕದ ಆಳ್ವಿಕೆಯ ನಂತರ ಆಮ್ ಆದ್ಮಿ ಪಕ್ಷ (ಎಎಪಿ)ಹೀನಾಯವಾಗಿ ಸೋತಿದ್ದು, ಅದರ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಘಟನಾಘಟಿ ನಾಯಕರು ಮಣ್ಣು ಮುಕ್ಕಿದ್ದಾರೆ.
ಒಟ್ಟು 70 ಸ್ಥಾನಗಳ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈವರೆಗೆ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದೆ ಹಾಗೂ ಇನ್ನೂ1 ಸ್ಥಾನಗಳಲ್ಲಿ ಮುಂದಿದೆ. ಆಮ್ ಆದ್ಮಿ ಪಾರ್ಟಿ 21ರಲ್ಲಿ ಗೆದ್ದಿದೆ ಹಾಗೂ 1ರಲ್ಲಿ ಮುನ್ನಡೆ ಸಾಧಿಸಿದೆ.
ಹಿಂದಿನ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಆಮ್ ಆದ್ಮಿ ಪಾರ್ಟಿ (ಎಎಪಿ) ಈ ಚುನಾವಣೆಯಲ್ಲಿ ಮುಗ್ಗರಿಸಿದೆ. ಇತ್ತ ಒಂದೇ ಒಂದು ಸ್ಥಾನದಲ್ಲಿ ಲೀಡ್ ಪಡೆಯಲು ವಿಫಲವಾದ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಶೂನ್ಯ ಸಂಪಾದನೆ ಮಾಡಲು ದಾಪುಗಾಲು ಇಡುತ್ತಿದೆ.
ಎಎಪಿಯ ಹಲವಾರು ನಾಯಕರು ಸೋತಿದ್ದಾರೆ. ಎಎಪಿಗೆ ದೊಡ್ಡ ಆಘಾತದಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಪರ್ವೇಶ್ ವರ್ಮಾ ಅವರ ವಿರುದ್ಧ ಪರಾಭವಗೊಂಡಿದ್ದಾರೆ. 2013 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಈ ಬಾರಿ 4,089 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಎಎಪಿಯ ನಂ.2 ನಾಯಕ ಮನೀಶ ಸಿಸೋಡಿಯಾ ಸಹ ಜಂಗ್ಪುರದಲ್ಲಿ ತರ್ವಿಂದರ್ ಸಿಂಗ್ ಮರ್ವಾ ಎದುರು ಸೋಲನುಭವಿಸಿದ್ದಾರೆ. ಒಂಬತ್ತು ಸುತ್ತುಗಳ ಎಣಿಕೆಯ ನಂತರ, ಅವರು 572 ಮತಗಳಿಂದ ಹಿಂದಿದ್ದರು. ನಂತರ “ನಾವು 600 ಮತಗಳಿಂದ ಸೋತಿದ್ದೇವೆ ಎಂದು ಅವರೇ ಹೇಳಿಕೊಂಡರು.
ಕೇಜ್ರಿವಾಲ್ ಬಂಧನದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅತಿಶಿ, ಕಲ್ಕಾಜಿಯಲ್ಲಿ ಬಿಜೆಪಿಯ ರಮೇಶ ಬಿಧುರಿ ವಿರುದ್ಧ ಗೆಲುವು ಸಾಧಿಸಿ ಎಎಪಿಯ ಮುಖವನ್ನು ಸ್ವಲ್ಪಮಟ್ಟಿಗೆ ಉಳಿಸಿದ್ದಾರೆ. ಆರೋಗ್ಯ ಸಚಿವ ಸೌರಭ ಭಾರದ್ವಾಜ್, ಆರಂಭದಲ್ಲಿ ಮುನ್ನಡೆ ಸಾಧಿಸಿದ ನಂತರ, ಗ್ರೇಟರ್ ಕೈಲಾಶ್ನಲ್ಲಿ ಬಿಜೆಪಿ ಅಭ್ಯರ್ಥಿ ಶಿಖಾ ರಾಯ್ ವಿರುದ್ಧ 3,188 ಮತಗಳಿಂದ ಸೋತರು.
ಬಿಜೆಪಿ ಅಭೂತಪೂರ್ವ ಗೆಲುವಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಜನಶಕ್ತಿಯೇ ಸರ್ವಶ್ರೇಷ್ಠ, ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಬಿಜೆಪಿ ಗೆಲ್ಲುವಂತೆ ಮಾಡಿದೆ ಎಂದು ಹೇಳಿದ್ದಾರೆ. “ದೆಹಲಿಯ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದರ ಜನರ ಜೀವನವನ್ನು ಉತ್ತಮಗೊಳಿಸಲು ನಾವು ಯಾವುದೇ ಅವಕಾಶವನ್ನೂ ಬಿಡುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ” ಎಂದು ಅವರು ಹೇಳಿದರು.
ಎಎಪಿ ಸೋಲು ಖಚಿತವಾದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಜನರ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಪಕ್ಷವು “ರಚನಾತ್ಮಕ ವಿಪಕ್ಷ”ದ ಪಾತ್ರವನ್ನು ನಿರ್ವಹಿಸಲಿದೆ ಎಂದು ಅವರು ಹೇಳಿದರು. ನಾವು ಅಧಿಕಾರಕ್ಕಾಗಿ ರಾಜಕೀಯದಲ್ಲಿಲ್ಲ, ಬದಲಿಗೆ ಜನಸೇವೆ ಮಾಡುವ ಮಾಧ್ಯಮ ಎಂದು ಪರಿಗಣಿಸುತ್ತೇವೆ ಎಂದರು.
ಫೆಬ್ರವರಿ 5 ರಂದು ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 60.54 ರಷ್ಟು ಮತದಾನವಾಗಿದೆ, 2020 ಕ್ಕೆ ಹೋಲಿಸಿದರೆ ಸುಮಾರು 2.5 ಶೇಕಡಾ ಮತದಾನದ ಪ್ರಮಾಣದಲ್ಲಿ ಕುಸಿತವಾಗಿದೆ. ಮುಸ್ತಫಾಬಾದ್ನಲ್ಲಿ ಅತಿ ಹೆಚ್ಚು 69.01% ಮತದಾನವಾದರೆ, ಆದರೆ ಅತ್ಯಂತ ಕಡಿಮೆ ಮತದಾನವೆಂದರೆ ಮೆಹ್ರೌಲಿಯಲ್ಲಿ 53.02% ಮತದಾನವಾಗಿದೆ.
ದೆಹಲಿ ಮಟ್ಟಿಗೆ ಎಕ್ಸಿಟ್ ಪೋಲ್ಗಳು ನಿಖರವಾಗಿತ್ತು ಎಂಬುದು ಫಲಿತಾಂಶದಲ್ಲಿ ಸಾಬೀತಾಗಿದೆ. ಹೆಚ್ಚಿನ ಎಕ್ಸಿಟ್ ಪೋಲ್ಗಳು ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು.
2015 ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಸೋಲಿಸಿದ ಎಎಪಿ ದೆಹಲಿಯ ರಾಜಕೀಯ ನಕ್ಷೆಯಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತ್ತು, 2015ರಲ್ಲಿ ಅದು ದೆಹಲಿಯ 70 ವಿಧಾನಸಭಾ ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯದಾಖಲಿಸಿತ್ತು. ಪಕ್ಷವು 2020 ರಲ್ಲಿ 62 ಸ್ಥಾನಗಳನ್ನು ಗೆದ್ದುಮತ್ತೆ ಸರ್ಕಾರ ರಚಿಸಿತ್ತು.
ಎಎಪಿಗೆ, ದೆಹಲಿ ಮದ್ಯ ನೀತಿ ಪ್ರಕರಣವು ಅದರ ದೊಡ್ಡ ಸವಾಲಾಗಿತ್ತು. ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ ಅರವಿಂದ ಕೇಜ್ರಿವಾಲ್ ಮತ್ತು ಅವರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪ್ರಕರಣದಲ್ಲಿ ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದರು.
ಜಕುಝಿ, ಸ್ವಿಮ್ಮಿಂಗ್ ಪೂಲ್ ಮತ್ತು ಚಿನ್ನದ ಲೇಪಿತ ಶೌಚಾಲಯಗಳನ್ನು ಹೊಂದಿರುವ ಐಷಾರಾಮಿ ಮುಖ್ಯಮಂತ್ರಿ ಬಂಗಲೆಗೆ ಅರವಿಂದ ಕೇಜ್ರಿವಾಲ್ ಸರ್ಕಾರದ ಬೃಹತ್ ವೆಚ್ಚದ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಈ ಬಂಗಲೆಗೆ “ಶೀಶ್ ಮಹಲ್” ಎಂದು ಕರೆದು ಎಎಪಿ ವಿರುದ್ಧ ವಾಗದಾಳಿ ನಡೆಸಿದ್ದವು.