ಬೆಳಗಾವಿ/ಬೆಂಗಳೂರು :
ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಚುರುಕುಗೊಂಡಿದೆ.
ಮತದಾರರನ್ನು ಸೆಳೆಯಲು ಬೇರೆಬೇರೆ ಹೆಸರನ್ನಿಟ್ಟು ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ನಡೆಸುತ್ತಿವೆ, ಪಕ್ಷಾಂತರಗಳು ಜೋರಾಗಿ ನಡೆಯುತ್ತಿದೆ.
ಈ ಮಧ್ಯೆ ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆನ್ನಲಾದ ವೀಡಿಯೊವೊಂದು ವೈರಲ್ ಆಗಿದೆ.
ಕಾಂಗ್ರೆಸ್ನವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿವಿಧಾನಸಭಾ ಕ್ಷೇತ್ರವಾರು ಪ್ರಜಾಧ್ವನಿ ಬಸ್ ಯಾತ್ರೆ ನಡೆಯುತ್ತಿದೆ. ನಿನ್ನೆ, ಬುಧವಾರ ಮಾರ್ಚ್ 1ರಂದು ಬೆಳಗಾವಿ( ಜಿಲ್ಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಾಯಿತು.
ಈ ವೇಳೆ ಬಸ್ಸಿನಲ್ಲಿ ಇತರ ನಾಯಕರೊಂದಿಗೆ ಸಿದ್ದರಾಮಯ್ಯ ಪ್ರಯಾಣಿಸಿದ್ದಾರೆ. ಆ ವೇಳೆ ಮಾತನಾಡುವಾಗ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರುವ ಬಗ್ಗೆ ಸಿದ್ದರಾಮಯ್ಯ ಇದನ್ನು ಹೇಳಿದ್ದಾರೆ ಎನ್ನಲಾಗಿದೆ. ಇದು ಚುನಾವಣಾ ಇರುವುದರಿಂದ ಅವರು ಜನರನ್ನು ಸೇರಿಸುತ್ತಾರೆ. ೫೦೦ ರೂ.ಗಳನ್ನು ಕೊಟ್ಟು ಜನರನ್ನು ಕರೆತರಬೇಕು ಎಂದು ಸಿದ್ದರಾಮಯ್ಯ ಹೇಳಿರುವ ವೀಡಿಯೊದ ತುಣುಕನ್ನು ರಾಜ್ಯ ಬಿಜೆಪಿ ಹಂಚಿಕೊಂಡಿದೆ. ಬಿಜೆಪಿ ಟ್ವೀಟ್ ಮಾಡಿದ ವೀಡಿಯೊದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಇತರರು ಇದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಘಟಕ, ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು, ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರುವ ಮದುಮಗನಂತೆ ಆಗಿದೆ ಎಂದು ಟಾಂಗ್ ನೀಡಿದೆ.