ಬೈಂದೂರು :
ಬೈಂದೂರು ವಿಧಾನಸಭಾ ಮತಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕಳಿಸಿದೆ. ಹಾಲಿ ಶಾಸಕ ಸುಕುಮಾರ್ ಶೆಟ್ಟಿ ಅವರನ್ನು ಕೈ ಬಿಟ್ಟು ಬಿಜೆಪಿ ಹಾಗೂ ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ ಗುರುರಾಜ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಿದೆ.
ಇವರು ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಬಲ ಬಂಟ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಗುರುರಾಜರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಡವರ ಮನೆ ಹುಡುಗನಿಗೆ ಟಿಕೆಟ್ ದೊರೆತಿದೆ ಎಂದು ಸಂದೇಶದೊಂದಿಗಿನ ಪೋಸ್ಟ್ ವೈರಲ್ ಆಗುತ್ತಿದೆ.
ಕಾಲಿಗೆ ಚಪ್ಪಲಿ ಧರಿಸದೆ ಅತ್ಯಂತ ಸರಳ ವ್ಯಕ್ತಿತ್ವ, ಜೀವನಶೈಲಿ ಮೈಗೂಡಿಸಿಕೊಂಡಿರುವ ಗುರುರಾಜ್ ಬಹಳ ಸಿಂಪಲ್.
ಆರ್ ಎಸ್ ಎಸ್ ಪೂರ್ಣಾವಧಿ ಪ್ರಚಾರಕರಾಗಿರುವ ಅವರು ಪತ್ರಿಕೋದ್ಯಮದಲ್ಲಿ ಉನ್ನತ ಪದವಿ ಪಡೆದಿದ್ದು ಸದಾ ಬಿಳಿ ಪಂಚೆ ಮತ್ತು ಅಂಗಿಯಲ್ಲಿ ಓಡಾಡುತ್ತಾರೆ.
ಬೈಂದೂರು ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದಲೂ ರಾಷ್ಟ್ರೀಯ ಪಕ್ಷಗಳ ನಡುವೆ ಹಣಾಹಣಿ ನಡೆಯುತ್ತಿದೆ, ಈ ಭಾರಿಯೂ ಕಾಂಗ್ರೆಸ್ ಪಕ್ಷದ ಕೆ. ಗೋಪಾಲ ಪೂಜಾರಿ ಹಾಗೂ ಬಿಜೆಪಿಯ ಗುರುರಾಜ ಗಂಟಿಹೊಳೆ ಅವರ ನಡುವೆ ಸ್ಪರ್ಧೆ ಇರಲಿದೆ. ಈ ನಡುವೆ ಟಿಕೆಟ್ ವಂಚಿತ ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹೇಗೆ ಚುನಾವಣೆಯಲ್ಲಿ ತೊಡಗಿಕೊಳ್ಳುತ್ತಾರೆ ಎನ್ನುವುದು ಕಾದುನೋಡಬೇಕಿದೆ. ಒಟ್ಟಾರೆ ಬೈಂದೂರು ವಿಧಾನಸಭಾ ಮತ ಕ್ಷೇತ್ರದಲ್ಲಿ ಈ ಸಲ ಹಳೆಮುಖ ಹಾಗೂ ಹಳೆ ಮುಖದ ನಡುವೆ ಭಾರೀ ಪೈಪೋಟಿ ನಡೆಯುವುದು ನಿಶ್ಚಿತ.