ಬೆಂಗಳೂರು :
ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಇಷ್ಟರಲ್ಲಿ ತನ್ನ ಅಭ್ಯರ್ಥಿಗಳ ಘೋಷಣೆ ಮಾಡಲಿದೆ.
ಕೆಲವೇ ಕೆಲವು ಮತಕ್ಷೇತ್ರಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ 224 ಮತಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಈಗಾಗಲೇ ತಯಾರಿಸಿದೆ. ಇದನ್ನು ದೆಹಲಿಯ ವರಿಷ್ಠರಿಗೆ ರವಾನಿಸಲಾಗಿದ್ದು ಅಧಿಕೃತ ಮುದ್ರೆ ಮಾತ್ರ ಬೇಕಿದೆ. ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಕೆಲ ಕ್ಷೇತ್ರಗಳಿಗೆ ಬಿಜೆಪಿ ಈ ಸಲವು ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಗೋಚರಿಸಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾ ಮತಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಕಣಕ್ಕಿಳಿಸಲಿರುವ ಅಭ್ಯರ್ಥಿಗಳು ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಒಟ್ಟಾರೆ, ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಘೋಷಣೆಯತ್ತ ಎಲ್ಲರ ಚಿತ್ತ ಹರಿದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೇತೃತ್ವದಲ್ಲಿ ಮಹತ್ವದ ಸಭೆ ಭಾನುವಾರ ನಡೆಯಲಿದೆ. ಸಂಜೆ 5 ಕ್ಕೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮೊದಲ ಹಂತದ ಪಟ್ಟಿ ಭಾನುವಾರ ರಾತ್ರಿ ಅಂತಿಮಗೊಳ್ಳಲಿದೆ. ಆದ್ದರಿಂದ ಭಾನುವಾರ ರಾತ್ರಿ ಇಲ್ಲವೇ ಸೋಮವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಜೆ.ಪಿ. ನಡ್ದಾ ಅವರ ಅಧ್ಯಕ್ಷತೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟ ಶನಿವಾರ ತಡರಾತ್ರಿವರೆಗೂ ಸಭೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮುಂತಾದವರು ಈಗಾಗಲೇ ದೆಹಲಿಯಲ್ಲಿದ್ದು ಸಭೆಯಲ್ಲಿ ಭಾಗವಹಿಸಿದ್ದಾರೆ.
ಬಿಜೆಪಿ ಮೊದಲ ಪಟ್ಟಿಯಲ್ಲಿ 150 ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ. ಹಾಲಿ ಶಾಸಕರ ಬದಲಿಗೆ ಹೊಸಬರಿಗೆ ಆದ್ಯತೆ ನೀಡಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಈ ಬಾರಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಬಂದಿದೆ.