ಭಾಸ್ಕರ ರಾವ್ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ನಂತರವೂ ಬೆಳಗಾವಿ ಜೊತೆ ಅವಿನಾಭಾವ ನಂಟು ಇಟ್ಟುಕೊಂಡಿದ್ದರು. ವಿವಿಧ ಸಂದರ್ಭಗಳಲ್ಲಿ ಬೆಳಗಾವಿಗೆ ಆಗಮಿಸಿ ತಮ್ಮ ಹಳೆಯ ನೆನಪುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಕಮಿಷನರ್ ಆಗಿದ್ದ ವೇಳೆ ರಾಜಕೀಯವಾಗಿ ಭವಿಷ್ಯದಲ್ಲಿ ಗುರುತಿಸಿಕೊಳ್ಳುವ ಹೆಬ್ಬಯಕೆ ಹೊಂದಿದ್ದ ಅವರು ಮೊದಲಿನಿಂದಲೂ ಜನರೊಂದಿಗೆ ಅವಿನಾಭಾವವಾಗಿ ಬೆರೆಯುತ್ತಿದ್ದರು.
ಜನ ಜೀವಾಳ ಜಾಲ: ಬೆಳಗಾವಿ : ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತರ ಕಚೇರಿಯ ಮೊದಲ ಕಮಿಷನರ್ ಆಗಿದ್ದ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಶ್ರಾಂತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅವರಿಗೆ ಇದೀಗ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.
ಬೆಂಗಳೂರು ಚಾಮರಾಜಪೇಟೆಯಿಂದ ಅವರು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಅವರು ಈ ಮೊದಲು ಬಸವನಗುಡಿ ಮತಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದರು. ಆಮ್ ಆದ್ಮಿ ಪಕ್ಷದಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಭಾಸ್ಕರ ರಾವ್ ಎರಡು ತಿಂಗಳಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಅವರು ಕೇಳಿದ್ದ ಬಸವನಗುಡಿ ಬದಲು ಚಾಮರಾಜನಗರದಲ್ಲಿ ಟಿಕೆಟ್ ನೀಡುವ ಮೂಲಕ ಅವರ ರಾಜಕೀಯ ಆಕಾಂಕ್ಷೆಗೆ ಅವಕಾಶ ಮಾಡಿಕೊಟ್ಟಿದೆ.
ಇಲ್ಲಿ ಭಾಸ್ಕರ ರಾವ್ ಅವರು ಕಾಂಗ್ರೆಸ್ನ ಬಲಿಷ್ಠ ಅಭ್ಯರ್ಥಿಯಾಗಿರುವ ಜಮೀರ್ ಅಹಮದ್ ಅವರನ್ನು ಎದುರಿಸುತ್ತಿದ್ದಾರೆ. ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕನಸು ಕಂಡಿರುವ ಬಿಜೆಪಿಗೆ ವಿಶ್ರಾಂತ ಐಪಿಎಸ್ ಬಲ ತಂದು ಕೊಡುವುದರಲ್ಲಿ ಎರಡು ಮಾತಿಲ್ಲ.