ಬೆಂಗಳೂರು :
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಮಾವೇಶಗಳ ಮೂಲಕ
ರಾಜಕೀಯ ಚಟುವಟಿಕೆ ರಂಗೇರಿಸಲಿವೆ. ಅದರಲ್ಲೂ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಇದೀಗ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿಕೊಂಡು ಅಭೂತಪೂರ್ವ ಸಮಾವೇಶ ನಡೆಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ.
ದಾವಣಗೆರೆಯಲ್ಲಿ ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಸಿದ್ಧರಾಮೋತ್ಸವಕ್ಕೆ ಪ್ರತಿಯಾಗಿ ಬಿಜೆಪಿ ಇದೀಗ ಬೃಹತ್ ಸಮಾವೇಶ ನಡೆಸಲು ಮುಂದಾಗಿದೆ.
ದಾವಣಗೆರೆ, ಬೆಂಗಳೂರು, ಮೈಸೂರು, ಚಿತ್ರದುರ್ಗ ಸೇರಿದಂತೆ ಯಾವ
ನಗರದಲ್ಲಿ ಸಮಾವೇಶ ಆಯೋಜಿಸಬೇಕು ಎಂಬ ಬಗ್ಗೆ ಬಿಜೆಪಿ ಇದೀಗ ಯೋಚಿಸುತ್ತಿದೆ.
ಅದರಲ್ಲೂ ಉತ್ತರ ಕರ್ನಾಟಕದ 2 ಮಹಾ ನಗರಗಳಾದ ಬೆಳಗಾವಿ ಹಾಗೂ ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ತಿಂಗಳುಗಳಲ್ಲಿ ಆಗಮಿಸಿ ಧೂಳೆಬ್ಬಿಸುವ ಸಾಧ್ಯತೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನವೆಂಬರ್ ನಲ್ಲಿ ರಾಜ್ಯಕ್ಕೆ ಕರೆಸಿಕೊಂಡು ಬೃಹತ್ ಸಮಾವೇಶ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಈ ಸಂದರ್ಭದಲ್ಲಿ ಹತ್ತು ಲಕ್ಷಕ್ಕಿಂತ ಅಧಿಕ ಜನರನ್ನು ಸೇರಿಸಲು ಯೋಜಿಸಲಾಗುತ್ತಿದೆ. ಈ ಮೂಲಕ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ತಿರುಗೇಟು ನೀಡಲು ಮುಂದಾಗುತ್ತಿದೆ.