ಮೈಸೂರು : ಮುಡಾಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಲೋಕಾಯುಕ್ತ ವಿಚಾರಣೆಯಲ್ಲಿ ಸತ್ಯವನ್ನು ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳು ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಲೋಕಾಯುಕ್ತ ವಿಚಾರಣೆಗೆ ಇಂದು ಹಾಜರಾಗಿದ್ದು, ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದೇನೆ. ಬಿಜೆಪಿಯವರು ಗೋಬ್ಯಾಕ್ ಸಿಎಂ ಎಂಬ ಪ್ರತಿಭಟನೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ನೇಹಮಯಿ ಕೃಷ್ಣ ಅವರು ಕೋರಿದಂತೆ,ರಾಜ್ಯಪಾಲರು ಆದೇಶದಂತೆ ಲೋಕಾಯುಕ್ತ ವಿಚಾರಣೆಯನ್ನು ನಡೆಸಲಾಗಿದೆ. ಬಿಜೆಪಿಯವರು ವಿಚಾರಣೆಯ ವಿರುದ್ಧವಾಗಿದ್ದಾರೆ ಎಂಬ ಅರ್ಥವಲ್ಲವೇ? ಇದರಿಂದ ಈ ಆರೋಪ ಸುಳ್ಳು ಎಂದು ಸ್ಪಷ್ಟವಾಗುತ್ತದೆ ಎಂದರು.
ವಿಚಾರಣೆ ನಡೆಸುವ ಲೋಕಾಯುಕ್ತ ನಂಬಿಕೆಯಿಲ್ಲ, ತನಿಖೆಯನ್ನು ಸಿಬಿಐ ನವರು ನಡೆಸಬೇಕೆಂಬ ಬಿಜೆಪಿಯವರ ಬೇಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದಲ್ಲಿ ಸಿಬಿಐ ಇದೆ. ಬಿಜೆಪಿಯವರು ಇದುವರೆಗೆ ಯಾವುದಾದರೂ ಹಗರಣವನ್ನು ಸಿಬಿಐ ಗೆ ವಹಿಸಿದ್ದಾರೆಯೇ? ಎಂದರು.
*ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ*
ಲೋಕಾಯುಕ್ತ ವಿಚಾರಣೆ ಪೂರ್ವನಿಯೋಜಿತವಾಗಿ, ನಿಷ್ಪಕ್ಷವಾಗುತ್ತದೆ ಎಂಬ ಬಿಜೆಪಿಯವರ ಆರೋಪ ಮಾಡುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸಿಬಿಐ ಯಂತೆ , ಲೋಕಾಯುಕ್ತ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಲೋಕಾಯುಕ್ತದ ನಂಬಿಕೆಯಿಲ್ಲದ ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಬಿಜೆಪಿಯವರು ಯಾವುದೇ ಪ್ರಕರಣವನ್ನು ಇದುವರೆಗೆ ಸಿಬಿಐ ಗೆ ನೀಡಿಲ್ಲ. ರಾಜ್ಯಪಾಲರು ಕೂಡ ಲೋಕಾಯುಕ್ತದಲ್ಲಿಯೇ ತನಿಖೆಯಾಗಬೇಕೆಂದು ಸೂಚಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿದೆ ಎಂದರು.
*ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರ*
ಮುಡಾದಿಂದ ಹಂಚಿಕೆಯಾದ 14 ನಿವೇಶನಗಳು ಕಾನೂನುಬದ್ಧವಾಗಿತ್ತೇ, ಅವುಗಳನ್ನು ವಾಪಸ್ಸು ನೀಡಲಾಯಿತೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ನಿವೇಶನ ಹಂಚಿಕೆ ಕಾನೂನೂ ಬದ್ಧವಾಗಿಯೇ ಆಗಿದೆ. ಬಿಜೆಪಿ ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ವಿಚಾರಣೆಯಲ್ಲಿ ಇಂದು ಉತ್ತರವನ್ನು ನೀಡಿದ್ದು, ತನಿಖೆಯನ್ನು ಕಾನೂನುರೀತ್ಯ ಮುಂದುವರೆಸಲಿದ್ದಾರೆ. ನನ್ನ ಮೇಲೆ ಬಂದ ಸುಳ್ಳು ಆರೋಪಗಳ ಮಾಡಲಾಗಿದ್ದರಿಂದ ನನ್ನ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿದರೆ ಹೊರತು, ತಪ್ಪು ಮಾಡಿದ್ದಕ್ಕಾಗಿ ನಿವೇಶನಗಳನ್ನು ವಾಪಸ್ಸು ನೀಡಲಾಗಿಲ್ಲ. ಈ ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನನ್ನ ಬಳಿಯಿಲ್ಲ ಹಾಗೂ ನನ್ನಿಂದ ಯಾವುದೇ ದಾಖಲೆ ಕೇಳಲಾಗಿಲ್ಲ. ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೆ ನನ್ನ ರಾಜಕೀಯ ಜೀವನಕ್ಕೆ ಯಾವುದೇ ಕಪ್ಪು ಮಸಿ ಇಲ್ಲ. ನನ್ನ ಮೇಲೆ ಮಾಡಲಾಗಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದರು.