ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ.
ಅವರು ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿಯವರಿಂದ ತೆರವಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದು, ಮಂಗಳವಾರ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಹೊಸಮುಖವಾಗಿರುವ ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಟಿಕೆಟ್ ಘೋಷಣೆ ಮಾಡಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಪ್ರಮೋದ ಮಧ್ವರಾಜ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಲ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಇದೀಗ ಕಿಶೋರಕುಮಾರ್ ಅವರಿಗೆ ಅವಕಾಶ ಸಿಕ್ಕಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರು ಸತತ ಮೂರು ಸಲ ಈ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು. ಬಿಜೆಪಿ ಇಲ್ಲಿ ಪ್ರಾಬಲ್ಯ ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಸಂಸ್ಥೆಗಳ ಬಿಜೆಪಿ ಮತದಾರರಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು ಬಿಜೆಪಿ ಅ ಅಭ್ಯರ್ಥಿ ಕಿಶೋರ್ ಕುಮಾರ್ ಗೆಲ್ಲುವ ಸಾಧ್ಯತೆ ಹೆಚ್ಚು.
ಅಕ್ಟೋಬರ್ 21 ರಂದು ಮತದಾನ, 24 ರಂದು ಮತ ಎಣಿಕೆ ನಡೆಯಲಿದೆ.
ನಾಯಕತ್ವಕ್ಕೆ ಮಾನ್ಯತೆ : ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ಲಭಿಸಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಅವರ ವಿರುದ್ಧ ಮಹಿಳೆಯೊಬ್ಬರು ಆರೋಪ ಹೊರಿಸಿ ದೂರು ನೀಡಿದ್ದರಿಂದ ಅವರ ಹೆಸರು ತೆರೆ ಮರೆಗೆ ಸರಿದಿತ್ತು. ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಬೀಡುಬಿಟ್ಟು ಕಸರತ್ತು ನಡೆಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಇದೀಗ ಮತ್ತೆ ಮುಖಭಂಗ ಅನುಭವಿಸಿದ್ದಾರೆ. ಕೊನೆ ಕ್ಷಣದಲ್ಲಿ ಕಿಶೋರ್ ಕುಮಾರ್ ಅವರಿಗೆ ಜಾಕ್ ಪಾಟ್ ಹೊಡೆದಿದೆ. ಪುತ್ತೂರು ಮೂಲದವರಾದ ಕಿಶೋರ್ ಕುಮಾರ್ ಅವರು ಬಿಜೆಪಿಯಲ್ಲಿ ಸುದೀರ್ಘ ಅವಧಿಗೆ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಕಳೆದ ಸಲ ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆಗೆ ಕಿಶೋರ್ ಕುಮಾರ್ ಅವರಿಗೆ ಟಿಕೆಟ್ ಲಭಿಸಬಹುದು ಎಂಬ ಮಾತು ಹರಡಿತ್ತು. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಕಿಶೋರ್ ಕುಮಾರ್ ಅವರು ಬಿಜೆಪಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ನಳಿನ್ ಕುಮಾರ್ ಕಟೀಲು ಮತ್ತು ಬಿಜೆಪಿ ನಾಯಕರ ನಡೆಯಿಂದಾಗಿ ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿದಿತ್ತು. ಆದರೂ ಕಿಶೋರ್ ಕುಮಾರ್ ಬಿಜೆಪಿ ಪರವಾಗಿ ನಿಂತಿದ್ದು ಕೊನೆಗೂ ಅವರಿಗೆ ಬಿಜೆಪಿ ಮೇಲ್ಮನೆಗೆ ತನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಮೂಲಕ ಅವರಲ್ಲಿರುವ ನಾಯಕತ್ವವನ್ನು ಗುರುತಿಸಿದಂತಾಗಿದೆ.
RSS ಕಾರ್ಯಕರ್ತ ಕಿಶೋರ್ ಕುಮಾರ್ :
ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಪಡೆದಿರುವ ಕಿಶೋರ್ ಕುಮಾರ್ ಕಟ್ಟಾ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದಾರೆ.
ಈ ಸಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಬಲವಾಗಿರುವ ಬಂಟ ಮತ್ತು ಬಿಲ್ಲವ ಸಮುದಾಯದ ನಾಯಕರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಹಿಂದುಳಿದ ಸವಿತಾ ಸಮಾಜದ (ಓಬಿಸಿ) ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬಜರಂಗದಳದ ಮಂಗಳೂರು ವಿಭಾಗ ಸಹ ಸಂಚಾಲಕರಾಗಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮತ್ತು ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.